ನವ ದೆಹಲಿ: ಟಿವಿ ಚರ್ಚೆಯೊಂದರಲ್ಲಿ ಪಾಲ್ಗೊಂಡು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ವಕ್ತಾರೆ ನೂಪುರ್ ಶರ್ಮಾರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ. ಇವರೊಂದಿಗೆ ದೆಹಲಿ ಬಿಜೆಪಿ ಮಾಧ್ಯಮ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್ ಕೂಡ ಸಸ್ಪೆಂಡ್ ಆಗಿದ್ದಾರೆ. ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟಂತೆ ಟಿವಿ ಡಿಬೇಟ್‌ನಲ್ಲಿ ಭಾಗವಹಿಸಿದ್ದ ನೂಪುರ್ ಶರ್ಮಾ, ಪ್ರವಾದಿ ಮೊಹಮ್ಮದ್‌ರನ್ನು ಟೀಕಿಸಿ ಮಾತುಗಳನ್ನಾಡಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ನೂಪುರ್ ಶರ್ಮಾರಿಗೆ ಜೀವ ಬೆದರಿಕೆಯೂ ಬಂದಿತ್ತು. ನಮ್ಮ ದೇಶದ ಮುಸ್ಲಿಂ ಸಂಘಟನೆಗಳಷ್ಟೇ ಅಲ್ಲ, ಪಾಕಿಸ್ತಾನದ ಮುಸ್ಲಿಂ ಮುಖಂಡರೂ ನೂಪುರ್ ಶರ್ಮಾ ಶಿರಚ್ಛೇದ ಮಾಡಲು ಕರೆಕೊಟ್ಟಿದ್ದರು. ಆಕೆಯನ್ನು ಯಾರು ಕೊಲ್ಲುತ್ತಾರೋ ಅವರಿಗೆ ಬಹುಮಾನ ಕೊಡುವುದಾಗಿಯೂ ಘೋಷಿಸಿದ್ದರು. ತನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬರುತ್ತಿರುವುದಾಗಿ ನೂಪುರ್ ಶರ್ಮಾ ಅವರೇ ಹೇಳಿಕೊಂಡಿದ್ದರು.
ನೂಪುರ್ ಶರ್ಮಾ ಹೇಳಿಕೆಯಿಂದ ಕಾನ್ಪುರದಲ್ಲಿ ದೊಡ್ಡಮಟ್ಟದ ಗಲಾಟೆ, ಹಿಂಸಾಚಾರ ನಡೆದಿದೆ. ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಯೊಂದು ಕಾನ್ಪುರ ಬಂದ್‌ಗೆ ಕರೆ ನೀಡಿತ್ತು. ಅದರಂತೆ ಬಂದ್ ದಿನ ಕೆಲವರು ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದರು. ಅದನ್ನು ಇನ್ನೊಂದು ಗುಂಪು ವಿರೋಧಿಸಿದೆ. ಆಗ ಎರಡೂ ಗುಂಪುಗಳ ಮಧ್ಯೆ ಘರ್ಷಣೆ-ಕಲ್ಲುತೂರಾಟ ನಡೆದಿದೆ. ಈ ಗಲಾಟೆ ತಾರಕಕ್ಕೇರಿ ಇದುವರೆಗೆ ಪೊಲೀಸರು 36 ಜನರನ್ನು ವಶಕ್ಕೆ ಪಡೆದಿದ್ದಾರೆ. ಅವರ ಮೊಬೈಲ್‌ಗಳನ್ನೆಲ್ಲ ಜಪ್ತಿ ಮಾಡಿದ್ದಾರೆ. ಈ ಹಿಂಸಾಚಾರದ ಪಿತೂರಿ ಮಾಡಿದಾತ ಹಯಾತ್ ಜಾಫರ್ ಹಶ್ಮಿ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ಕೇಸ್; ವಿಡಿಯೋ ಬಿಡುಗಡೆ ಮಾಡಿ ಟೀಕೆಗೆ ಗುರಿಯಾದ ಬಿಜೆಪಿ ಮುಖಂಡ !
ಇದೆಲ್ಲದರ ಮಧ್ಯೆ ನೂಪುರ್ ಶರ್ಮಾರಿಂದ ಬಿಜೆಪಿ ಕೂಡ ಅಂತರ ಕಾಯ್ದುಕೊಂಡಿತ್ತು. ಯಾವುದೇ ಧರ್ಮ, ಪಂಥ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ-ಅವಹೇಳನ ಮಾಡುವ ಸಿದ್ಧಾಂತ ಬಿಜೆಪಿಯದ್ದಲ್ಲ. ಅದನ್ನು ಬಿಜೆಪಿ ಖಂಡಿತವಾಗಿಯೂ ವಿರೋಧಿಸುತ್ತದೆ. ಪ್ರತಿಯೊಬ್ಬರಿಗೂ ಅವರು ನಂಬಿದ ಧರ್ಮವನ್ನು ಅನುಸರಿಸುವ ಹಕ್ಕಿದೆ ಎಂದು ನಮ್ಮ ಸಂವಿಧಾನವೇ ಹೇಳಿದೆ ಎಂದು ಪ್ರಕಟಣೆ ಹೊರಡಿಸಿತ್ತು. ಈ ಪ್ರಕಟಣೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಹಿ ಇದೆ. ಹಾಗಂತ ಪ್ರಕಟಣೆಯಲ್ಲಿ ನೂಪುರ್ ಶರ್ಮಾ ಹೆಸರೇನೂ ಇರಲಿಲ್ಲ. ಆದರೆ ಬಿಜೆಪಿಯಿಂದ ಈ ಸ್ಟೇಟ್‌ಮೆಂಟ್ ಹೊರಬಿದ್ದ ಬೆನ್ನಲ್ಲೇ ನೂಪುರ್ ಶರ್ಮಾ ಮತ್ತು ಅವರನ್ನು ಟಿವಿ ಡಿಬೇಟ್‌ಗೆ ಕಳಿಸಿದ ಮಾಧ್ಯಮ ಉಸ್ತುವಾರಿ ಇಬ್ಬರೂ ಅಮಾನತುಗೊಂಡಿದ್ದಾರೆ.
ಮುಸ್ಲಿಂ ರಾಷ್ಟ್ರಗಳ ಆಕ್ಷೇಪ
ಈ ನಡುವೆ ಬಿಜೆಪಿ ವಕ್ತಾರೆಯ ಹೇಳಿಕೆ ಕುರಿತು ಕತಾರ್, ಇರಾನ್ ಮುಂತಾದ ಮುಸ್ಲಿಂ ದೇಶಗಳು ಗರಂ ಆಗಿವೆ. ಭಾರತೀಯ ರಾಯಭಾರ ಸಿಬ್ಬಂದಿಗೆ ಸಮನ್ಸ್ ನೀಡಿ ವಿವರಣೆ ಕೇಳಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ವಿದೇಶಾಂಗ ಅಧಿಕಾರಿಗಳು ʼʼಇದು ಭಾರತದ ನಿಲುವಲ್ಲ. ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆʼʼ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ನೂಪುರ್ ಶರ್ಮಾ ಶಿರಚ್ಛೇದ ಮಾಡಿದರೆ 50 ಲಕ್ಷ ರೂ. ಕೊಡುವುದಾಗಿ ಪಾಕಿಸ್ತಾನಿಗಳಿಂದ ಘೋಷಣೆ