Site icon Vistara News

ಪ್ರವಾದಿ ಮೊಹಮ್ಮದ್​ಗೆ ಅವಹೇಳನ; ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಪಕ್ಷದಿಂದಲೇ ಅಮಾನತು

Raja Singh

ತೆಲಂಗಾಣ: ಪ್ರವಾದಿ ಮೊಹಮ್ಮದ್​ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ತೆಲಂಗಾಣ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ (T Raja Singh)​​ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇದೀಗ ಕೊಟ್ಟಿರುವ ಶೋಕಾಸ್​ ನೋಟಿಸ್​​ಗೆ 10ದಿನಗಳ ಒಳಗೆ ಉತ್ತರ ನೀಡದೆ ಇದ್ದಲ್ಲಿ, ಪಕ್ಷದಿಂದ ಉಚ್ಚಾಟನೆಗೊಳಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ. ಟಿ. ರಾಜಾ ಅವರು ಪ್ರವಾದಿ ಮೊಹಮ್ಮದ್​ ವಿರುದ್ಧ ಮಾತನಾಡಿದ ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಅದನ್ನು ನೋಡಿದ ಮುಸ್ಲಿಂ ಸಮುದಾಯದವರು ಹೈದರಾಬಾದ್​ನ ಅನೇಕ ಕಡೆಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು. ಟಿ. ರಾಜಾ ವಿರುದ್ಧ ಎಫ್​ಐಆರ್​ ದಾಖಲಾಗಿ, ಇಂದು (ಆಗಸ್ಟ್​ 23) ಬೆಳಗ್ಗೆ ಅವರು ಅರೆಸ್ಟ್ ಕೂಡ ಆಗಿದ್ದಾರೆ.

ಟಿ. ರಾಜಾ ಸಿಂಗ್ ವಿಡಿಯೋ ವೈರಲ್ ಆಗಿ ವಿವಾದ ಎದ್ದ ಬೆನ್ನಲ್ಲೇ, ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್​ ಅವರು ರಾಜಾಸಿಂಗ್​​ಗೆ ನೋಟಿಸ್​ ಕೊಟ್ಟಿದ್ದರು. ‘ಪಕ್ಷದ ಸಿದ್ಧಾಂತ, ನಿಲುವಿನ ವಿರುದ್ಧ ನೀವು ಹೇಳಿಕೆ ಕೊಟ್ಟಿದ್ದೀರಿ. ಬಿಜೆಪಿ ಪಕ್ಷದಿಂದ ನಿಮ್ಮ ತನಿಖೆ ಮಾಡುವುದು ಬಾಕಿ ಇದೆ. ಸದ್ಯ ನಿಮ್ಮನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದ್ದು, ಕೊಟ್ಟ ಸಮಯದಲ್ಲಿ ನೋಟಿಸ್​ಗೆ ಉತ್ತರ ಕೊಡದೆ ಇದ್ದಲ್ಲಿ ಉಚ್ಚಾಟನೆಯಾಗುತ್ತೀರಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಟಿ.ರಾಜಾ ಸಿಂಗ್ ವಿರುದ್ಧ ಕಾರ್ಯಕರ್ತ ವಾಜಿಹುದ್ದೀನ್​ ಸಲ್ಮಾನ್​ ಎಂಬುವರು ದೂರು ಕೊಟ್ಟಿದ್ದರು. ‘ಬಿಜೆಪಿ ಶಾಸಕ ರಾಜಾ ಸಿಂಗ್​ ಅವರು ಪ್ರವಾದಿ ವಿರುದ್ಧ ಅಶ್ಲೀಲ ಮಾತುಗಳನ್ನಾಡಿದ್ದಾರೆ. ನಂತರ ಆ ವಿಡಿಯೋವನ್ನು ಶ್ರೀರಾಮ ಚಾನೆಲ್​ ಎಂಬ ಯುಟ್ಯೂಬ್​ ಚಾನೆಲ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿವಾದ ಸೃಷ್ಟಿಯಾಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದರು. ಸದ್ಯ ರಾಜಾ ಸಿಂಗ್​ ವಿರುದ್ಧ ಐಪಿಸಿ ಸೆಕ್ಷನ್​ 153 ಎ (ಧಾರ್ಮಿಕ ವಿಚಾರಗಳನ್ನು ಉಲ್ಲೇಖಿಸಿ, ಎರಡು ಸಮುದಾಯದ ನಡುವೆ ದ್ವೇಷ ಹರಡಿದ ಆರೋಪ)ರಡಿ ಕೇಸ್​ ದಾಖಲಾಗಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ಜಿ.ಕೋಟೇಶ್ವರ ರಾವ್​ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರವಾದಿ ಮೊಹಮ್ಮದ್​ಗೆ ಅವಹೇಳನ; ತೆಲಂಗಾಣ ಬಿಜೆಪಿ ಶಾಸಕ ಬಂಧನ

Exit mobile version