Site icon Vistara News

Modi Birthday | ಮೋದಿ ಬರ್ತ್​ ಡೇ ದಿನ ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರ ನೀಡಲಿದೆ ತಮಿಳುನಾಡು ಬಿಜೆಪಿ

BJP to distribute gold rings to Newborn on PM Modi birthday In Tamil Nadu

ಚೆನ್ನೈ: ನಾಳೆ (ಸೆಪ್ಟೆಂಬರ್​ 17) ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟಿದ ದಿನ (PM Modi Birthday). ಮೋದಿಯವರ 72ನೇ ವರ್ಷದ ಬರ್ತ್​ ಡೇಯನ್ನು ತಮಿಳುನಾಡು ಬಿಜೆಪಿ ಘಟಕ ತುಂಬ ವಿಶೇಷವಾಗಿ, ವಿಭಿನ್ನವಾಗಿ ಆಚರಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ನಾಳೆ ರಾಷ್ಟ್ರಾದ್ಯಂತ ಬಿಜೆಪಿ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣೆಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ತಮಿಳು ನಾಡು ಬಿಜೆಪಿ ಘಟಕ ಇದೆಲ್ಲಕ್ಕೂ ಮಿಗಿಲಾಗಿ, ‘ನಾಳೆ ಹುಟ್ಟಲಿರುವ ಶಿಶುಗಳಿಗೆ ಬಂಗಾರದ ಉಂಗುರ ಕೊಡಲು ನಿರ್ಧಾರ ಮಾಡಿದೆ’

ಹಾಗಂತ ತಮಿಳುನಾಡು ರಾಜ್ಯಾದ್ಯಂತ ನಾಳೆ ಯಾವುದೇ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೂ ಬಿಜೆಪಿ ಚಿನ್ನದ ಉಂಗುರ ಕೊಡಲಿದೆ ಎಂದುಕೊಳ್ಳಬೇಡಿ. ಹಾಗಲ್ಲ, ತಮಿಳುನಾಡಿನ ಆರ್​ಎಸ್​ಆರ್​ಎಂ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.17ರಂದು ಹುಟ್ಟುವ ಮಕ್ಕಳಿಗೆ ಬಿಜೆಪಿ ಚಿನ್ನದ ಉಂಗುರ ಉಡುಗೊರೆ ಕೊಡಲಿದೆ. ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಮೀನುಗಾರಿಕೆ ಹಾಗೂ ಮಾಹಿತಿ ಮತ್ತು ಪ್ರಸಾರ ವಿಭಾಗದ ಉಸ್ತುವಾರಿ ಎಲ್​.ಮುರುಗನ್​ ಮಾಹಿತಿ ನೀಡಿದ್ದು ‘ನಾವು ಪ್ರಧಾನಿ ಮೋದಿಯವರ ಹುಟ್ಟಿದ ದಿನವನ್ನು ಸಂಭ್ರಮಿಸಲು ಈ ನಿರ್ಧಾರ ಕೈಗೊಂಡಿದ್ದೇವೆ ಹೊರತು, ಮತ್ಯಾವುದೇ ಕಾರಣಕ್ಕೂ ಅಲ್ಲ. ಪ್ರತಿ ಉಂಗುರದಲ್ಲೂ 2 ಗ್ರಾಂ.ಚಿನ್ನ ಇರಲಿದ್ದು, 5000 ರೂಪಾಯಿ ಬೆಲೆ ಬಾಳಲಿದೆ ಎಂದು ಹೇಳಿದ್ದಾರೆ. ಇದರೊಂದಿಗೆ 720 ಗ್ರಾಂ ಮೀನನ್ನು ಕೂಡ ಕೊಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಇನ್ನು ಸೆ.17ರಂದು ಆರ್​ಎಸ್​ಆರ್​ಎಂ ಆಸ್ಪತ್ರೆಯಲ್ಲಿ ಅಂದಾಜು 10-15 ಮಕ್ಕಳು ಹುಟ್ಟಬಹುದು ಎನ್ನಲಾಗಿದೆ.

ಪ್ರತಿವರ್ಷವೂ ಪ್ರಧಾನಿ ಹುಟ್ಟುಹಬ್ಬವನ್ನು ಬಿಜೆಪಿ ತುಂಬ ವಿಶೇಷವಾಗಿ ಆಚರಣೆ ಮಾಡುತ್ತದೆ. ಈ ಸಲ ದೇಶಾದ್ಯಂತ ‘ಸೇವಾ ಪಖವಾಡಾ’ ಎಂದು ಆಚರಿಸುವುದಾಗಿ ಹೇಳಿದೆ ಅದರಡಿಯಲ್ಲಿ ಎಲ್ಲ ಕಡೆ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರಗಳು ನಡೆಯಲಿವೆ. ಇನ್ನು ಯಾರೂ ಕೇಕ್ ಕತ್ತರಿಸುವುದಾಗಲೀ, ಹವನಗಳನ್ನು ನಡೆಸುವುದಾಗಲೀ ಮಾಡುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್​ ಸಿಂಗ್​ ಆಗಸ್ಟ್​ 30ರಂದು ಎಲ್ಲ ರಾಜ್ಯಗಳ ಬಿಜೆಪಿ ಕಚೇರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Cheetah | ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದೇ ಭಾರತಕ್ಕೆ ಬರಲಿವೆ ಎಂಟು ಚೀತಾಗಳು!

Exit mobile version