ನವ ದೆಹಲಿ: ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್ ಭುಟ್ಟೋ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ‘ಗುಜರಾತ್ನ ಕಟುಕ’ ಎಂದು ಕರೆದು ಹೀಗಳೆದ ಬೆನ್ನಲ್ಲೇ ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಪ್ರಾರಂಭವಾಗಿದೆ. ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಸಮೀಪ ಅಪಾರ ಸಂಖ್ಯೆಯಲ್ಲಿ ಸೇರಿರುವ ಬಿಜೆಪಿ ಕಾರ್ಯಕರ್ತರು ‘ಬಿಲಾವಲ್ ಭುಟ್ಟೋ ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸುತ್ತಿದ್ದಾರೆ.
ಆಕ್ರೋಶ ಭರಿತರಾಗಿ ರಾಯಭಾರ ಕಚೇರಿ ಎದುರು ಮುನ್ನುಗ್ಗುತ್ತಿದ್ದ ಕಾರ್ಯಕರ್ತರನ್ನು ತಡೆಯಲು ದೆಹಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದರು. ಆದರೆ ಆಕ್ರೋಶಭರಿತರಾದ ಕಾರ್ಯಕರ್ತರು ಅದನ್ನೂ ಮುರಿದು, ಮುನ್ನುಗ್ಗಿದರು. ಬಳಿಕ ಪೊಲೀಸರು ಚಾಣಕ್ಯಪುರಿ ಬಳಿ ಇನ್ನೊಂದು ಲೇಯರ್ನ ಬ್ಯಾರಿಕೇಡ್ಗಳನ್ನು ಹಾಕಿದ್ದಲ್ಲದೆ, ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗ ನಡೆಸಿದ್ದಾರೆ. ಕೆಲವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಒಡಿಶಾ, ಮುಂಬಯಿಯಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಲಾವಲ್ ಭುಟ್ಟೋ ಹೇಳಿದ್ದೇನು?
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಬಿಲಾವಲ್ ಭುಟ್ಟೋ ಅವರು, ”ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ, ಗುಜರಾತ್ ಜನರ ಕಟುಕ ಬದುಕಿದ್ದಾರೆ ಮತ್ತು ಅವರು ಭಾರತದ ಪ್ರಧಾನಿಯಾಗಿದ್ದಾರೆ,” ಎಂದು ಹೇಳಿದ್ದರು. ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡುವಾಗ ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡುವಾಗ ಭುಟ್ಟೋ ಪ್ರಧಾನಿ ಮೋದಿ ಅವರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: BJP Protest | ಭುಟ್ಟೋ ʼಕಟುಕʼ ಹೇಳಿಕೆಗೆ ಬಿಜೆಪಿ ಕೆಂಡ; ಬೆಂಗಳೂರು ಸೇರಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ