ಪಣಜಿ: ಉತ್ತರ ಗೋವಾದ ಡಾಂಗುಯಿ ಕಾಲೋನಿಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ (Goa Bar and Restaurant) ನಲ್ಲಿ ಭಾನುವಾರ ಮುಂಜಾನೆ ಭೀಕರಸ್ಫೋಟ(Goa Blast)ವುಂಟಾಗಿದೆ. ಈ ಸ್ಫೋಟಕ್ಕೆ ಕಾರಣವೇನು ಎಂಬುದೇ ನಿಗೂಢವಾಗಿತ್ತು. ಆದರೆ ಈಗ ಸ್ಫೋಟದ ಕಾರಣ ಬಹಿರಂಗವಾಗಿದೆ. ಬಾರ್ &ರೆಸ್ಟೋರೆಂಟ್ನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ (Cylinder Blast)ವಾಗಿದೆ ಎಂದು ಹೇಳಲಾಗಿದೆ. ಯಾರಿಗೂ ಗಾಯವಾಗಿಲ್ಲ, ಯಾರ ಪ್ರಾಣವೂ ಹೋಗಿಲ್ಲ, ಆದರೆ ರೆಸ್ಟೋರೆಂಟ್ಗೆ ಸುಮಾರು 40 ಲಕ್ಷ ರೂಪಾಯಿ ನಷ್ಟವಾಗಿದ್ದಾಗಿ ವರದಿಯಾಗಿದೆ. ಸ್ಫೋಟದ ಭಯಾನಕ ವಿಡಿಯೊ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಈ ಬಾರ್ ಆ್ಯಂಡ್ ರೆಸ್ಟೋರೆಂಟ್ ಎರಡು ಅಂತಸ್ತಿನ ಕಟ್ಟಡವಾಗಿದ್ದು, ಭಾನುವಾರ ಮುಂಜಾನೆ ನೆಲ ಮಾಳಿಗೆಯಲ್ಲಿ ಭಯಂಕರ ಶಬ್ದವಾಯಿತು. ವಸ್ತುಗಳೆಲ್ಲ ಹೊರಬಿದ್ದು ಬೆಂಕಿ ಹೊತ್ತಿ ಸಿಡಿದಿದ್ದನ್ನು ವಿಡಿಯೊದಲ್ಲಿ ನೋಡಬಹುದು. ಅಷ್ಟೇ ಅಲ್ಲ, ಆ ರೆಸ್ಟೋರೆಂಟ್ ಬಾಗಿಲಲ್ಲಿ ನಿಂತಿದ್ದ ಬೈಕ್, ಸ್ಕೂಟರ್, ಕಾರುಗಳಿಗೆಲ್ಲ ಹಾನಿಯಾಗಿದೆ. ಅಲ್ಲೇ ಪಕ್ಕದಲ್ಲಿದ್ದ ಅಪಾರ್ಟ್ಮೆಂಟ್ನ ಕೆಲವು ಮನೆಗಳ ಕಿಟಕಿ ಗಾಜುಗಳು ಪುಡಿಯಾಗಿವೆ. ಸ್ಫೋಟ ನಡೆದ ಸ್ಥಳದಿಂದ 50 ಮೀಟರ್ ದೂರದವರೆಗೆ ಅದರ ಪರಿಣಾಮ ಉಂಟಾಗಿದೆ.
ಸ್ಫೋಟ ಉಂಟಾಗುತ್ತಿದ್ದಂತೆ ಕೂಡಲೇ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟೇ ಅಲ್ಲ, ವಿಧಿವಿಜ್ಞಾನ ತಜ್ಞರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ತಂಡಗಳು ಕೂಡ ಆಗಮಿಸಿದ್ದವು. ಇಡೀ ಸ್ಥಳವನ್ನು ಪರಿಶೀಲನೆ ಮಾಡಲಾಗಿತ್ತು. ಎಲ್ಲಿಯೂ ಬಾಂಬ್ ಮತ್ತು ಇತರ ಮಾರಕಾಸ್ತ್ರಗಳ ಪತ್ತೆಯಾಗಿರಲಿಲ್ಲ. ರೆಸ್ಟೋರೆಂಟ್ನ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟದಿಂದಲೇ ಅವಘಡ ಆಗಿದೆ ಎಂದು ಹೇಳಿರುವ ಪೊಲೀಸ್ ಅಧಿಕಾರಿ ಜಿವ್ಬದಾ ದಾಲ್ವಿ, ತನಿಖೆ ಮುಂದುವರಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Viral Video: ದ್ರೌಪದಿ ಅಮ್ಮನ ಉತ್ಸವದಲ್ಲಿ ಭಕ್ತರ ಮೇಲೆ ಕ್ರೇನ್ ಬಿದ್ದು ನಾಲ್ವರ ಸಾವು; ತಮಿಳುನಾಡು ದೇಗುಲದಲ್ಲಿ ದುರಂತ