ಲಖನೌ: ಉತ್ತರ ಪ್ರದೇಶದ ಬುಲಂದ್ಶಹರ್ನ ಹೊಲಗಳ ಮಧ್ಯೆ ಇದ್ದ ಮನೆಯೊಂದರಲ್ಲಿ ಭಯಂಕರ ಸ್ಫೋಟ (Massive Blast) ಉಂಟಾಗಿದ್ದು, ಇಡೀ ಮನೆ ಚೂರುಚೂರಾಗಿ ಬಿದ್ದಿದೆ. ಸದ್ಯ ನಾಲ್ವರ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ತೆರಳಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದಲೇ ಅವಘಡ ನಡೆದಿರಬಹುದು ಎಂದು ಗೋಚರಿಸುತ್ತದೆ, ಆದರೆ ತನಿಖೆಯ ನಂತರವಷ್ಟೇ ಸ್ಪಷ್ಟ ಮಾಹಿತಿ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಅಭಿಷೇಕ್ (20), ರಯೀಸ್ (40), ಆಹದ್ (5) ಮತ್ತು ವಿನೋದ್ ಎಂದು ಗುರುತಿಸಲಾಗಿದೆ. ಆಹದ್ ಮತ್ತು ವಿನೋದ್ ಇಬ್ಬರೂ ಮಕ್ಕಳು. ಬುಲಂದ್ಶಹರ್ನ ಕೊತ್ವಾಲಿ ನಗರದಲ್ಲಿ, ನಯಾಗಾಂವ್ ಎಂಬಲ್ಲಿ ಈ ಮನೆ ಇತ್ತು. ಹೊಲಗಳ ಮಧ್ಯೆ ಮನೆಯಿದ್ದು, ಸುತ್ತಮುತ್ತ ಯಾವುದೇ ಮನೆಗಳೂ ಇರಲಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಇನ್ನು ಮನೆಯ ಗೋಡೆಗಳೆಲ್ಲ ಸಂಪೂರ್ಣವಾಗಿ ಒಡೆದು ಬಿದ್ದಿವೆ. ಒಂದಕ್ಕಿಂತಲೂ ಹೆಚ್ಚು ಸಿಲಿಂಡರ್ಗಳು ಸ್ಥಳದಲ್ಲಿ ಸಿಕ್ಕಿವೆ. ಸ್ಥಳಕ್ಕೆ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳೂ ಭೇಟಿಕೊಟ್ಟಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿಯಲು ವಿಧಿ ವಿಜ್ಞಾನ ಘಟಕದ ತಂಡವನ್ನೂ ಕರೆಸಲಾಗಿದೆ. ಈ ಘಟನೆಯನ್ನು ಎಲ್ಲ ಆಯಾಮದಲ್ಲೂ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ಚಂದ್ರಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: Albino Deer: ಉತ್ತರ ಪ್ರದೇಶದ ಕತರ್ನಿಯಾ ಘಾಟ್‌ನಲ್ಲಿ ಅಪರೂಪದ ಬಿಳಿ ಜಿಂಕೆ ಪತ್ತೆ, ಫೋಟೋ ವೈರಲ್!
ಹೊಸಕೋಟೆಯಲ್ಲಿ ದುರಂತ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಳೆದ ಭಾನುವಾರ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಏಳುಮಂದಿ ಸಾವನ್ನಪ್ಪಿದ್ದಾರೆ. ಇದು ಇಂದಷ್ಟೇ ಬೆಳಕಿಗೆ ಬಂದಿದೆ. ಅವಘಡದಲ್ಲಿ ಸಾವನ್ನಪ್ಪಿದವರೆಲ್ಲ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರು ಎಂದು ವರದಿಯಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರನ್ನು ಕರೆದುಕೊಂಡು ಬಂದು ಇಲ್ಲಿ ಕಾಮಗಾರಿಗಳಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಅವರಿಗೆ ಒಂದು ಶೆಡ್‌ನಲ್ಲಿ ವಾಸವಾಗಿರಲು ವ್ಯವಸ್ಥೆ ಮಾಡಲಾಗಿತ್ತು. ಕಳೆದ ಭಾನುವಾರ ರಾತ್ರಿಯೂ ಈ ಕಾರ್ಮಿಕರು ಮೇಡಹಳ್ಳಿಯ ಅಂತಹುದೇ ಒಂದು ಶೆಡ್‌ನಲ್ಲಿ ಮಲಗಿದ್ದರು. ಹೊರಗಡೆ ಊಟ ಮಾಡಿಕೊಂಡು ಬಂದು ಅವರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಯಾವುದೋ ಕಾರಣದಿಂದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು. ಬಳಿಕ ಬೆಂಕಿ ಹೊತ್ತುಕೊಂಡಿತ್ತು.