Site icon Vistara News

Bob Blackman: ಪ್ರಧಾನಿ ಮೋದಿ ಬಗೆಗಿನ ಬಿಬಿಸಿ ಸಾಕ್ಷ್ಯಚಿತ್ರವನ್ನು ಖಂಡಿಸಿದ ಬ್ರಿಟಿಷ್ ಸಂಸದ ಬಾಬ್ ಬ್ಲ್ಯಾಕ್‌ಮನ್

#image_title

ನವದೆಹಲಿ: ಬ್ರಿಟಿಷ್ ಮೂಲದ ಮಾಧ್ಯಮ ಸಂಸ್ಥೆಯಾಗಿರುವ ಬಿಬಿಸಿ(BBC) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ತಯಾರಿಸಿರುವ ಸಾಕ್ಷ್ಯಚಿತ್ರದ ಕುರಿತಾಗಿ ಬ್ರಿಟಿಷ್ ಸಂಸತ್ತಿನ ಸಂಸದರಾದ ಬಾಬ್ ಬ್ಲ್ಯಾಕ್‌ಮನ್ (Bob Blackman) ಅವರು ಅಸಮಾಧಾನ ಹೊರಹಾಕಿದ್ದಾರೆ. ಇದು ಬಿಬಿಸಿ ಪ್ರಚಾರಕ್ಕೆಂದು ಮಾಡಿಕೊಂಡಿರುವ ವಿಡಿಯೊ ಎಂದು ಅವರು ದೂರಿದ್ದಾರೆ.

ಭಾರತದ ಮಾಧ್ಯಮ ಸಂಸ್ಥೆಯಾದ ಎಎನ್ಐ ಜತೆ ಸಂದರ್ಶನದಲ್ಲಿ ಮಾತನಾಡಿರುವ ಬಾಬ್ ಅವರು, “ಇದು ನಿಜಕ್ಕೂ ನಾಚಿಕೆಗೇಡಿನ ಪತ್ರಿಕೋದ್ಯಮದ ಅವಮಾನಕರ ತುಣುಕು. ಬಿಬಿಸಿ ಇಂತಹ ವಿಡಿಯೊವನ್ನು ಎಂದಿಗೂ ಪ್ರಸಾರ ಮಾಡಬಾರದು. 2002ರ ಗಲಭೆಯಲ್ಲಿ ಮೋದಿ ಅವರಿಗೆ ಸಂಬಂಧವಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ವಿಡಿಯೊದಲ್ಲಿ ಅಂತಹ ಪ್ರಮುಖ ಅಂಶಗಳನ್ನೇ ತೋರಿಸಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: IT Survey at BBC Offices: 58 ಗಂಟೆ ಬಳಿಕ ಬಿಬಿಸಿ ಕಚೇರಿಗಳಲ್ಲಿ ‘ಸಮೀಕ್ಷೆ’ ನಿಲ್ಲಿಸಿದ ಐಟಿ, ಸಿಕ್ಕ ದಾಖಲೆ ಏನು?

ಹಾಗೆಯೇ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದಿರುವ ಬಗ್ಗೆಯೂ ಮಾತನಾಡಿರುವ ಬಾಬ್, “ಇದು ಇಂದು, ನಿನ್ನೆಯ ಸಮಸ್ಯೆಯಲ್ಲ. ಭಾರತದಲ್ಲಿನ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಬಿಬಿಸಿ ನಡುವೆ ಚರ್ಚೆಗಳು ಹಲವು ಕಾಲದಿಂದ ನಡೆಯುತ್ತಿದೆ. ಪ್ರಸಾರಕರು ಸಂಬಂಧಿತ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು” ಎಂದು ನುಡಿದಿದ್ದಾರೆ.

ಬ್ರಿಟಿಷ್ ಸರ್ಕಾರವು ಭಾರತವನ್ನು ಬಲವಾದ ಸ್ನೇಹಿತ ಎಂದು ಪರಿಗಣಿಸುತ್ತದೆ. ಉಭಯ ದೇಶಗಳು ವ್ಯಾಪಾರ ಒಪ್ಪಂದಗಳ ಮಾತುಕತೆ ನಡೆಸುತ್ತಿವೆ. ನಾವು ಒಂದು ವರ್ಷದ ಹಿಂದೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ, ಈಗ ಭದ್ರತೆ, ರಕ್ಷಣೆ ಮತ್ತು ಇತರ ವಿಷಯಗಳ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಈ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಯಾವುದೇ ವಿಚಾರವಾದರೂ ಅದು ಅತ್ಯಂತ ವಿಷಾದನೀಯ. ಬಿಬಿಸಿ ಸಾಕ್ಷ್ಯಚಿತ್ರವು ಕೂಡ ಅತ್ಯಂತ ವಿಷಾದನೀಯ. ಇದು ಇಂಗ್ಲೆಂಡ್-ಭಾರತದ ಸಂಬಂಧವನ್ನು ಅಡ್ಡಿಪಡಿಸಲೆಂದೇ ಮಾಡಿದಂತೆ ಕಾಣುತ್ತದೆ. ಇದು ದೊಡ್ಡ ಅವಮಾನ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ ಸಂಸದ ಬಾಬ್.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿಯೂ ಮಾತನಾಡಿರುವ ಅವರು, “ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ದೇಶದ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಗಮನಾರ್ಹ ಕೆಲಸ ಮಾಡಿದೆ. ಈಗ ಭಾರತ ವಿಶ್ವದ ಪ್ರಮುಖ ಆರ್ಥಿಕತೆಯ ಹಾದಿಯಲ್ಲಿದೆ. ಹಾಗಿರುವಾಗ ಈ ರೀತಿಯ ಸುಳ್ಳು ತುಂಬಿರುವ ಸಾಕ್ಷ್ಯಚಿತ್ರ ಮಾಡಿರುವುದು ದೊಡ್ಡ ತಪ್ಪು” ಎಂದಿದ್ದಾರೆ.

ಇದನ್ನೂ ಓದಿ: IT Raid : ಅವರು ಸತ್ಯ ಹೇಳಿದ ಬಿಬಿಸಿಯವರನ್ನೇ ಬಿಟ್ಟಿಲ್ಲ, ನಮ್ಮನ್ನು ಬಿಡ್ತಾರಾ?; ಪ್ರಭಾಕರ ರೆಡ್ಡಿ ಐಟಿ ದಾಳಿಗೆ ಎಚ್‌ಡಿಕೆ ಪ್ರತಿಕ್ರಿಯೆ

“ಇಂತಹದ್ದೊಂದು ಸಾಕ್ಷ್ಯಚಿತ್ರವನ್ನು ಬಿಬಿಸಿ ಎಂದಿಗೂ ಪ್ರಸಾರ ಮಾಡಬಾರದು. ಏಕೆಂದರೆ ಬಿಬಿಸಿ ವಿಶ್ವಾದ್ಯಂತ ಖ್ಯಾತಿಯನ್ನು ಹೊಂದಿದೆ. ಒಂದು ವೇಳೆ ಈ ವಾಹಿನಿಯೇ ಇದನ್ನು ಬಿತ್ತರಿಸಿದರೆ ಜನರು ಅದನ್ನು ನಿಜ ಎಂದು ಭಾವಿಸಿಬಿಡುತ್ತಾರೆ. ಇದು ಸತ್ಯಕ್ಕೆ ದೂರವಾಗಿದೆ” ಎಂದೂ ಸಂಸದರು ಹೇಳಿದ್ದಾರೆ. ಬ್ಲ್ಯಾಕ್‌ಮ್ಯಾನ್ ಅವರು ಆಡಳಿತಾರೂಢ ಕನ್ಸರ್ವೇಟಿವ್‌ನ ಸದಸ್ಯ ಮತ್ತು ಹ್ಯಾರೋ ಈಸ್ಟ್‌ನ ಸಂಸದರಾಗಿದ್ದಾರೆ.

“ನಾನು ಸ್ಪಷ್ಟವಾಗಿ ಹೇಳುತ್ತೇನೆ. ಬಿಬಿಸಿ ಬ್ರಿಟಿಷ್ ಸರ್ಕಾರದ ಅಂಗವಲ್ಲ. ವಾಸ್ತವವಾಗಿ, ಬಿಬಿಸಿ ಆಗಾಗ್ಗೆ ಬ್ರಿಟಿಷ್ ಸರ್ಕಾರವನ್ನೂ ಟೀಕಿಸುತ್ತದೆ. ಮಾಧ್ಯಮಗಳು ಪ್ರಶ್ನೆಗಳನ್ನು ಕೇಳಬಹುದು. ಆದರೆ ಅದಕ್ಕೆ ವಿರುದ್ಧವಾದ ಪುರಾವೆಗಳು ಇದ್ದಾಗ ಮತ್ತು ಅದು ಸ್ಪಷ್ಟವಾಗಿಲ್ಲದಿದ್ದಾಗ, ಸುಳ್ಳು ಸುದ್ದಿಗಳನ್ನು ಬಿತ್ತರಿಸಬಾರದು” ಎಂದು ಬಾಬ್ ಬ್ಲ್ಯಾಕ್‌ಮನ್ ಸಂದರ್ಶನದಲ್ಲಿ ಹೇಳಿದ್ದಾರೆ.

Exit mobile version