ಬಾಲಿವುಡ್ ನಟ ಸಲ್ಮಾನ್ ಖಾನ್ಗೆ (Salman Khan) ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ. ಈ ಸಲ ಕರೆ ಮಾಡಿದವರು ಏಪ್ರಿಲ್ 30ರೊಳಗೆ ಹತ್ಯೆ ಮಾಡುವುದಾಗಿ ನಟನಿಗೆ ಬೆದರಿಕೆ ಹಾಕಿದ್ದಾರೆ ಎಂದು ಎಎನ್ಐ ಸುದ್ದಿ ಮಾಧ್ಯಮ ವರದಿ ಮಾಡಿದೆ. ಮುಂಬಯಿ ಪೊಲೀಸರು ಕೂಡ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ತನ್ನನ್ನು ತಾನು ರಾಕಿ ಭಾಯ್ ಎಂದು ಪರಿಚಯಿಸಿಕೊಂಡವನೊಬ್ಬ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದ. ತಾನು ರಾಜಸ್ಥಾನದ ಜೋಧ್ಪುರದಿಂದ ಕರೆ ಮಾಡುತ್ತಿರುವುದಾಗಿಯೂ ಹೇಳಿಕೊಂಡು, ಏಪ್ರಿಲ್ 30ರೊಳಗೆ ಸಲ್ಮಾನ್ ಖಾನ್ರನ್ನು ಹತ್ಯೆಗೈಯ್ಯುವುದಾಗಿ ಹೇಳಿದ್ದಾನೆ. ನಾವು ತನಿಖೆ ಪ್ರಾರಂಭಿಸಿದ್ದೇವೆ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ.
ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹೊಸದಲ್ಲ. ಕೃಷ್ಣಮೃಗ ಕೊಂದ ಅವರ ಮೇಲೆ ಬಿಷ್ಣೋಯಿ ಸಮುದಾಯದ ಕೆಂಗಣ್ಣು ಇದೆ. ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯಂತೂ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲೂ ಕೂಡ, ಸಲ್ಮಾನ್ ಖಾನ್ರನ್ನು ಕೊಂದೇ ತೀರುತ್ತೇನೆ. ಅವರನ್ನು ಕೊಂದಾಗಲೇ ನಾನು ನಿಜವಾದ ಗ್ಯಾಂಗ್ಸ್ಟರ್ ಎನ್ನಿಸಿಕೊಳ್ಳುತ್ತೇನೆ ಎಂದಿದ್ದ. ಆತ ಈ ಹೇಳಿಕೆ ನೀಡಿದ ಬೆನ್ನಲ್ಲೇ ಮಾರ್ಚ್ 18ರಂದು ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಸಂದೇಶವಿರುವ ಇಮೇಲ್ ಬಂದಿತ್ತು. ಅದೂ ಕೂಡ ಅವರ ಪರಿಚಿತರೊಬ್ಬರಿಗೆ ಮೇಲ್ ಬಂದಿತ್ತು. ಅದರ ಬೆನ್ನಲ್ಲೇ ಸಲ್ಮಾನ್ ಖಾನ್ ಮನೆ ಬಳಿ ಭದ್ರತೆ ಹೆಚ್ಚಿಸಲಾಗಿತ್ತು. ಅವರಿಗೆ ಈಗಾಗಲೇ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಹಾಗೇ ಸಲ್ಮಾನ್ ಖಾನ್ ಕೂಡ ತಮ್ಮ ವೈಯಕ್ತಿಕ ರಕ್ಷಣೆಯತ್ತ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ಬುಲೆಟ್ ಪ್ರೂಫ್ ನಿಸಾನ್ ಪಾಟ್ರೋಲ್ ಎಸ್ಯುವಿ ಖರೀದಿ ಮಾಡಿದ್ದರು. ಭಾರತೀಯ ಮಾರುಕಟ್ಟೆಯಲ್ಲಿ ಸಿಗದ ಈ ಕಾರನ್ನು, ಆಮದು ಮಾಡಿಸಿಕೊಂಡಿದ್ದರು.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ನನ್ನು ಕೊಂದೇ ತೀರುತ್ತೇನೆ, ನನ್ನ ಜೀವನದ ಗುರಿ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್
ಈ ಹಿಂದೆ ಪಂಜಾಬ್ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯಾದ ಸಂದರ್ಭದಲ್ಲೂ ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಪತ್ರವೊಂದು ಬಂದಿತ್ತು. ನಿಮ್ಮೊಂದಿಗೆ ನಿಮ್ಮ ತಂದೆ ಸಲೀಂ ಖಾನ್ರನ್ನೂ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಸಂದೇಶವಾಗಿತ್ತು. ಸಲೀಂ ಖಾನ್ ಪ್ರತಿನಿತ್ಯ ವಾಕಿಂಗ್ಗೆ ಹೋಗುವ ಸ್ಥಳದಲ್ಲಿ ಈ ಪತ್ರ ಸಿಕ್ಕಿತ್ತು. ಸಲ್ಮಾನ್ ಖಾನ್ ಅವರು 1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದ ಜೋಧ್ಪುರಕ್ಕೆ ಹೋಗಿದ್ದರು. ಇದೇ ವೇಳೆ ಸಫಾರಿಗೆ ಹೋದ ಅವರು ಒಂದು ಕೃಷ್ಣಮೃಗವನ್ನು ಬೇಟೆಯಾಟಿದ್ದಾರೆ. ಆದರೆ, ಬಿಷ್ಣೋಯಿ ಸಮುದಾಯದವರು ಪ್ರಕೃತಿ ಆರಾಧಕರಾಗಿದ್ದು, ಕೃಷ್ಣಮೃಗವನ್ನು ಅವರು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದೇ ಭಾವಿಸುತ್ತಾರೆ. ಹಾಗಾಗಿ, ಸಲ್ಮಾನ್ ಖಾನ್ ವಿರುದ್ಧ ಇದೇ ಸಮುದಾಯದ ಗ್ಯಾಂಗ್ಸ್ಟರ್ಗಳು ಕತ್ತಿಮಸೆಯುತ್ತಿದ್ದಾರೆ ಎನ್ನಲಾಗಿದೆ.