ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿರುವ ಸಾಸಾರಾಮ್ ಪಟ್ಟಣದಲ್ಲಿ ಶ್ರೀರಾಮನವಮಿ ದಿನದಿಂದಲೂ ಹಿಂಸಾಚಾರ ಭುಗಿಲೆದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಏಪ್ರಿಲ್ 1ರಂದು ಸ್ವಲ್ಪ ಮಟ್ಟಿಗೆ ಶಾಂತಿ ಸ್ಥಾಪನೆಯಾಗಿತ್ತಾದರೂ ಸಂಜೆ ಹೊತ್ತಿಗೆ ಬಾಂಬ್ ಸ್ಫೋಟವಾಗಿ (Bomb Blast) 5 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಫೋಟವುಂಟಾದ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಬಾಂಬ್ ಸ್ಫೋಟ ಪ್ರಕರಣವನ್ನು ನಾವು ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಸಾಸಾರಾಮ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ. ಇದೇ ಸಾಸಾರಾಮ್ ನಗರಕ್ಕೆ ಇಂದು ಗೃಹ ಸಚಿವ ಅಮಿತ್ ಶಾ ಭೇಟಿ ನೀಡುವವರು ಇದ್ದರು. ಆದರೆ ಆ ಭೇಟಿ ನಿನ್ನೆಯೇ ರದ್ದಾಗಿದೆ.
ಸಾಸಾರಾಮ್ನಲ್ಲಿ ಒಂದು ಜೋಪಡಿ (ಗುಡಿಸಲು)ಯಲ್ಲಿ ಬಾಂಬ್ ಸ್ಫೋಟವಾಗಿದ್ದು, ಘಟನೆ ನಡೆದ ಸ್ಥಳದಿಂದ ಒಂದು ಸ್ಕೂಟರ್ನ್ನು ವಶಪಡಿಸಿಕೊಳ್ಳಲಾಗಿದೆ. ಇದು ಕೋಮು ಗಲಾಟೆಗೆ ಸಂಬಂಧಪಟ್ಟ ವಿಷಯವಲ್ಲ ಎಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಆದರೂ ಆ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಸಾಸಾರಾಮ್ನಲ್ಲಿ ಪೊಲೀಸ್, ಸ್ಪೆಶಲ್ ಟಾಸ್ಕ್ ಫೋರ್ಸ್ ಮತ್ತು ಪ್ಯಾರಾ ಮಿಲಿಟರಿ ತಂಡಗಳ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಇನ್ನೊಂದೆಡೆ ಕೋಮುಗಲಭೆ
ಬಿಹಾರದ ಸಾಸಾರಾಮ್ನಲ್ಲಿ ಒಂದೆಡೆ ಬಾಂಬ್ ಸ್ಫೋಟವಾದರೆ ಇನ್ನೊಂದೆಡೆ ಬಿಹಾರ ಶರೀಫ್ನ ಪಹರಾಪುರ್ ಮತ್ತು ಕಸ್ಗಂಜ್ ಎಂಬಲ್ಲಿ ಶನಿವಾರ ಮತ್ತೆ ಹಿಂದು-ಮುಸ್ಲಿಂ ಗಲಾಟೆಯಾಗಿದೆ. ಎರಡೂ ಸಮುದಾಯಗಳ ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ. ಅದರಲ್ಲಿ ಪಹರಾಪುರ್ ಏರಿಯಾದಲ್ಲಿ ನಡೆದ ಗಲಭೆಯಲ್ಲಿ ಇಬ್ಬರಿಗೆ ಗುಂಡೇಟು ಬಿದ್ದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Ram Navami Violence: ಹೌರಾ ಗಲಭೆಯ ತನಿಖೆ ಎನ್ಐಎಗೆ ವಹಿಸಲು ಪ್ರಧಾನಿ ಮೋದಿಗೆ ಮನವಿ; ಅಮಿತ್ ಶಾ ಬಿಹಾರ ಭೇಟಿ ರದ್ದು
ಬಿಹಾರದ ಸಾಸಾರಾಮ್, ನಳಂದಾ ಸೇರಿ ಅನೇಕ ಕಡೆ ಶ್ರೀರಾಮನವಮಿ ದಿನದಿಂದಲೂ ಕೋಮು ಗಲಾಟೆ-ಹಿಂಸಾಚಾರ ನಡೆಯುತ್ತಲೇ ಇದೆ. ಅಲ್ಲಿನ ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿ ರದ್ದಾಗಿದೆ. ಅಮಿತ್ ಶಾ ಅವರು ಏಪ್ರಿಲ್ 1ರಂದು ಸಂಜೆ ಪಾಟ್ನಾಕ್ಕೆ ತೆರಳಿ, ಅಲ್ಲಿಂದ ಇಂದು (ಏ.2) ಸಾಸಾರಾಮ್ಗೆ ಹೋಗಲಿದ್ದರು. ಇಲ್ಲಿ ಸಾರ್ವಜನಿಕ ಸಭೆ ನಡೆಸಿ, ಬಳಿಕ ನಾವಡಾದಲ್ಲಿ ಕೂಡ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದರು. ಆದರೆ ಸಾಸಾರಾಮ್ ಸೇರಿ, ಬಿಹಾರದ ಹಲವು ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. ಸೆಕ್ಷನ್ 144 ವಿಧಿಸಲಾಗಿದೆ. ಬಿಹಾರದ ಸಾಸಾರಾಮ್ ಮತ್ತು ನಳಂದಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಪೊಲೀಸರು 45 ಮಂದಿಯನ್ನು ಬಂಧಿಸಿದ್ದಾರೆ. ಅದರಲ್ಲಿ 27 ಜನರು ನಳಂದಾದಲ್ಲಿ ಮತ್ತು 18 ಮಂದಿ ಸಾಸಾರಾಮ್ನಲ್ಲಿ ಬಂಧಿತರಾಗಿದ್ದಾರೆ.