ನವ ದೆಹಲಿ: ಕೇರಳದ ಕಣ್ಣೂರ್ ಜಿಲ್ಲೆಯ ಪಯ್ಯನ್ನೂರ್‌ನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS)ಕಚೇರಿ ಮೇಲೆ ಇಂದು ಮುಂಜಾನೆ (ಜುಲೈ 12) ಬಾಂಬ್ ದಾಳಿಯಾಗಿದೆ. ಕಟ್ಟಡದ ಕಿಟಕಿಯ ಗಾಜುಗಳೆಲ್ಲ ಒಡೆದು ಚೂರಾಗಿವೆ ಎಂದು ಪಯ್ಯನ್ನೂರ್ ಪೊಲೀಸರು ತಿಳಿಸಿದ್ದಾರೆ. ಹಾಗೇ, ಬಾಂಬ್ ದಾಳಿಯಿಂದ ಹೆಚ್ಚೇನೂ ಅಪಾಯವಾಗಿಲ್ಲ. ಯಾರದ್ದೂ ಜೀವ ಹಾನಿಯಾಗಿಲ್ಲ. ಯಾರೂ ಗಾಯಗೊಂಡಿಲ್ಲ ಎಂದೂ ಹೇಳಿದ್ದಾರೆ.
ಆರ್‌ಎಸ್‌ಎಸ್ ಕಚೇರಿ ಮೇಲೆ ಬಾಂಬ್ ದಾಳಿ ಮಾಡಿದ್ದು ಯಾರು? ದಾಳಿಯಾಗಿದ್ದಕ್ಕೆ ಕಾರಣವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭ ಮಾಡಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಟಾಮ್ ವಡಕ್ಕನ್, ರಾಜ್ಯದಲ್ಲಿ ಒಂದು ಸಾಮಾಜಿಕ ಸಂಘಟನೆಯ ಕಚೇರಿ ಮೇಲೆ ಬಾಂಬ್ ದಾಳಿ ಆಗುವಷ್ಟು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರೆ ಅದು ನಿಜಕ್ಕೂ ಆಘಾತಕಾರಿ. ನಾಗರಿಕ ಸಮಾಜ ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ಹಿಂದೆಯೂ ಕೂಡ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಅನೇಕ ರೀತಿಯ ದಾಳಿಗಳು-ಹಲ್ಲೆಗಳು ನಡೆದಿವೆ. ಈ ಬಗ್ಗೆ ಪೊಲೀಸ್ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು ಯಾಕೆಂದು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ 12 ವಿದ್ಯಾರ್ಥಿಗಳ ಸೆರೆ