Site icon Vistara News

ಮಗಳ ಸಾವಿಗೆ ಪರಿಹಾರ ಕೇಳಿ ಅರ್ಜಿ ಸಲ್ಲಿಸಿದ ತಂದೆ; ಕೇಂದ್ರ ಸರ್ಕಾರಕ್ಕೆ ನೋಟಿಸ್​ ನೀಡಿದ ಬಾಂಬೆ ಹೈಕೋರ್ಟ್​

Bombay High court orders to son to vacate his mother flat

ಮುಂಬೈ: ಇತ್ತೀಚೆಗೆ ಹೃದಯಾಘಾತ, ಹೃದಯ ಸ್ತಂಭನ ಪ್ರಕರಣಗಳು ಹೆಚ್ಚುತ್ತಿರಲು ಕಾರಣ ಕೊರೊನಾ ಲಸಿಕೆಗಳೇ ಕಾರಣ (Covishield Vaccine Side Effects)ಎಂಬುದೊಂದು ನಂಬಿಕೆ ಹರಿದಾಡುತ್ತಿದೆ. ಅದನ್ನು ಸಾಕ್ಷೀಕರಿಸಲು ಯಾವುದೇ ಪುರಾವೆಯೂ ಇಲ್ಲ. ಹಾಗಿದ್ದಾಗ್ಯೂ ಕೊವಿಡ್​ 19 ಸೋಂಕಿನ ನಿಯಂತ್ರಣಕ್ಕೆ ಕೊಡಲಾಗುತ್ತಿರುವ ಲಸಿಕೆಗಳು ಹೃದಯದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಹಾಗೇ, ಮುಂಬೈನಲ್ಲೊಬ್ಬ ವ್ಯಕ್ತಿ ಇದೇ ವಿಷಯವನ್ನು ಪ್ರತಿಪಾದಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆತನ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​ ‘ಉತ್ತರ ಕೊಡಿ’ ಎಂದು ಕೇಂದ್ರ ಸರ್ಕಾರಕ್ಕೆ ನೋಟಿಸ್​ ಕೂಡ ಕೊಟ್ಟಿದೆ.

ಅರ್ಜಿದಾರರ ಹೆಸರು ದಿಲೀಪ್​ ಎಂದಾಗಿದ್ದು, ಔರಂಗಾಬಾದ್​ ನಿವಾಸಿ. ‘ನನ್ನ ಪುತ್ರಿ ಡಾ. ಸ್ನೇಹಲ್​ ಲುನಾವತ್​. ಈಕೆ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಳು. ನಾಸಿಕ್​​ನಲ್ಲಿರುವ ಒಂದು ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. 2021ರಂದು ಆಗಸ್ಟ್​ 28ರಂದು ಕೊವಿಶೀಲ್ಡ್ ಲಸಿಕೆ ಕೊಡಲಾಗಿತ್ತು. ಇವಳು ಬೇಡವೆಂದರೂ, ಆರೋಗ್ಯ ಕಾರ್ಯಕರ್ತೆಯಾಗಿದ್ದರಿಂದ ತೆಗೆದುಕೊಳ್ಳಲೇಬೇಕು ಎಂದು ಹೇಳಲಾಗಿತ್ತು. ಈ ಲಸಿಕೆ ತೆಗೆದುಕೊಂಡ ಕೆಲವೇ ದಿನದಲ್ಲಿ ಆಕೆಗೆ ಅತಿಯಾದ ತಲೆನೋವು-ವಾಂತಿ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋದರೆ ಆಕೆಗೆ ಮಿದುಳಿನಲ್ಲಿ ರಕ್ತಸ್ರಾವ ಆಗುತ್ತಿದೆ ಎಂದು ವೈದ್ಯರು ಹೇಳಿದರು. ನಂತರ 2021ರ ಮಾರ್ಚ್​ 1ರಂದು ನನ್ನ ಮಗಳು ಮೃತಪಟ್ಟಳು. ಇವೆಲ್ಲವೂ ಕೊರೊನಾ ಲಸಿಕೆಯ ಅಡ್ಡಪರಿಣಾಮವೇ ಆಗಿದೆ. ಹೀಗಾಗಿ ನಮಗೆ 1000 ಕೋಟಿ ರೂಪಾಯಿ ಪರಿಹಾರ ನೀಡಬೇಕು’ ಎಂದು ಹೈಕೋರ್ಟ್​ಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ದಿಲೀಪ್​ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಬಾಂಬೆ ಹೈಕೋರ್ಟ್​ ಕೊವಿಶೀಲ್ಡ್ ತಯಾರಕ ಕಂಪನಿ ಸೀರಂ ಇನ್​ಸ್ಟಿಟ್ಯೂಟ್​, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಷ್ಟೇ ಅಲ್ಲ, ದೆಹಲಿಯ ಏಮ್ಸ್​, ಮಹಾರಾಷ್ಟ್ರ ಸರ್ಕಾರ, ಡ್ರಗ್ಸ್ ಕಂಟ್ರೋಲರ್​ ಆಫ್​ ಇಂಡಿಯಾ (ಭಾರತದ ಔಷಧ ನಿಯಂತ್ರಣಾ ಪ್ರಾಧಿಕಾರ)ಕ್ಕೂ ಉತ್ತರ ನೀಡುವಂತೆ ಸೂಚಿಸಿದೆ. ಅಂದಹಾಗೇ, ಬಾಂಬೆ ಹೈಕೋರ್ಟ್​​ನ ನ್ಯಾಯಮೂರ್ತಿಗಳಾದ ಎಸ್​.ವಿ. ಎಸ್ ವಿ ಗಂಗಾಪುರವಾಲಾ ಮತ್ತು ಮಾಧವ್ ಜಾಮದಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸುತ್ತಿದ್ದು, ನವೆಂಬರ್​ 17ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: Anocovax: ಭಾರತದಲ್ಲಿ ಪ್ರಾಣಿಗಳಿಗೂ ಬಂತು ಕೊವಿಡ್‌ 19 ಲಸಿಕೆ; ಕೃಷಿ ಸಚಿವರಿಂದ ಬಿಡುಗಡೆ

Exit mobile version