ಪುದುಚೇರಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಬಾಂಬ್ ಹಾಕಿ ಕೊಲ್ಲಲಾಗಿದ್ದು, ಆ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪುದುಚೇರಿಯ ಕಣುವಪೆಟ್ಟೈ ಬಿಜೆಪಿ ಕಾರ್ಯಕರ್ತ (Puducherry BJP worker) ಸೆಂಥಿಲ್ ಕುಮಾರ್ ಭಾನುವಾರ ರಾತ್ರಿ 9ಗಂಟೆ ಹೊತ್ತಿಗೆ ಬೇಕರಿಯೊಂದರ ಎದುರು ನಿಂತು ಏನೋ ಖರೀದಿ ಮಾಡುತ್ತಿದ್ದರು. ಆಗ ಅಲ್ಲಿಗೆ ಬೈಕ್ನಲ್ಲಿ ಏಳು ಮಂದಿ ಬಂದಿದ್ದಾರೆ. ಅದರಲ್ಲೊಬ್ಬ ಬೈಕ್ನಿಂದ ಇಳಿದು, ಸೆಂಥಿಲ್ ಕುಮಾರ್ರತ್ತ ಎರಡು ಕಂಟ್ರಿ ಮೇಡ್ ಬಾಂಬ್ಗಳನ್ನು ಎಸೆದಿದ್ದನ್ನು ವಿಡಿಯೊದಲ್ಲಿ ನೋಡಬಹುದು. ಸೆಂಥಿಲ್ ಕುಮಾರ್ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ಸೆಂಥಿಲ್ ಕುಮಾರ್ ಅವರು ಪುದುಚೇರಿ ಗೃಹ ಸಚಿವ ಎ.ನಮಸ್ಸಿವಾಯ ಅವರ ಹತ್ತಿರದ ಸಂಬಂಧಿ ಎಂದು ಹೇಳಲಾಗಿದೆ. ಆ ರಸ್ತೆಯಲ್ಲಿ ಜನಸಂಚಾರ ಇತ್ತು. ಕೆಲವರು ಅಲ್ಲೇ ರಸ್ತೆ ಪಕ್ಕ ನಿಂತಿದ್ದರು. ಅದರ ಮಧ್ಯೆಯೂ ಆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.
ಸೆಂಥಿಲ್ ಮೇಲೆ ಬಾಂಬ್ ದಾಳಿ ಆದ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಅಲ್ಲಿಗೆ ಧಾವಿಸಿದರು. ಸೆಂಥಿಲ್ ಕುಟುಂಬದವರು-ಬಂಧುಗಳೆಲ್ಲ ಬಂದು ಅಲ್ಲಿ ನೆರೆದಿದ್ದಾರೆ. ಅಷ್ಟೇ ಅಲ್ಲ, 700ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದರು. ಗೃಹ ಸಚಿವ ಎ. ನಮಸ್ಸಿವಾಯ ಅವರೂ ಅಲ್ಲಿಗೆ ಬಂದಿದ್ದರು. ಗೃಹಸಚಿವರು ಸೆಂಥಿಲ್ ಮೃತದೇಹವನ್ನು ನೋಡುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ಸದ್ಯ ಅವರ ಮೃತದೇಹವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಲಾಗಿದೆ.
ಇದನ್ನೂ ಓದಿ: PM Modi status : ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಮೋದಿ ಫೋಟೊ ಹಾಕಿದ್ದ ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆ
ದುಷ್ಕರ್ಮಿಗಳು ಮೊದಲು ಬಾಂಬ್ ಹಾಕಿದ್ದಾರೆ. ಅದು ಸ್ಫೋಟವಾಗಿ, ದೊಡ್ಡಮಟ್ಟದ ಹೊಗೆ ಎದ್ದಿದೆ. ಅದೇ ವೇಳೆ ಕೆಳಗೆ ಬಿದ್ದ ಸೆಂಥಿಲ್ ಅವರಿಗೆ ದುಷ್ಕರ್ಮಿಗಳು ಕೋಲಿನಿಂದ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದರೆ ಅವರನ್ನು ಹೇಗಾದರೂ ಸರಿ ಕೊಲ್ಲಲೇಬೇಕು ಎಂದು ಅವರು ಪಣತೊಟ್ಟುಬಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳೆಲ್ಲ ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 42ವರ್ಷದ ಸೆಂಥಿಲ್ ಅವರು ಮಂಗಲಂ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಬಿಜೆಪಿ ಕಾರ್ಯಕರ್ತ. ಪಕ್ಷದ ಕಾರ್ಯಚಟುವಟಿಕೆಗಳ ಜತೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಕೊಂಡಿದ್ದರು. ಆದರೆ ಈ ದುಷ್ಕರ್ಮಿಗಳಿಗೆ ಸೆಂಥಿಲ್ ಮೇಲೆ ಏನು ದ್ವೇಷವಿತ್ತು ಎಂಬುದು ಸ್ಪಷ್ಟವಾಗಿಲ್ಲ.