ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಅಮ್ಮನ ನಡುವಿನ ಬಾಂಧವ್ಯವನ್ನು ಇಡೀ ವಿಶ್ವ ನೋಡಿದೆ. ನರೇಂದ್ರ ಮೋದಿ ಅವರು ತನ್ನ ಅಮ್ಮನೊಟ್ಟಿಗೆ ಅದೆಷ್ಟು ಭಾವನಾತ್ಮಕವಾಗಿ ಹೊಂದಿಕೊಂಡಿದ್ದರು, ಅವರೆಷ್ಟು ವಿಧೇಯ ಪುತ್ರನಾಗಿದ್ದರು ಎಂಬುದೂ ನಮಗೆಲ್ಲ ಗೊತ್ತಿದೆ. ಅಂಥ ಅಮ್ಮನನ್ನು ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದುಕೊಂಡಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಹೀರಾಬೆನ್ ಇಂದು ಮುಂಜಾನೆ ನಿಧನಹೊಂದಿದ್ದಾರೆ. ನರೇಂದ್ರ ಮೋದಿ ತನ್ನಮ್ಮನಿಗೆ ಅದೆಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು, ತಮ್ಮ ವಿಶೇಷ ಕ್ಷಣಗಳಲ್ಲೆಲ್ಲ ಅಮ್ಮನಿದ್ದಲ್ಲಿಗೆ ಓಡೋಡಿ ಬಂದು ಆಶೀರ್ವಾದ ಬೇಡುತ್ತಿದ್ದರು ಅವರು. ಇಂದು ಕೂಡ ಅತ್ಯಂತ ಭಾವನಾತ್ಮಕವಾದ ಟ್ವೀಟ್ ಮೂಲಕ ಅಮ್ಮನ ನಿಧನದ ಸುದ್ದಿಯನ್ನು ದೇಶದ ಜನಕ್ಕೆ ತಿಳಿಸಿದ್ದಾರೆ.
ತಾಯಿ-ಮಗನ ಬಾಂಧವ್ಯ
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆದ್ದಿತ್ತು. ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗಿಯೂ ಹೋಗಿತ್ತು. 2014ರ ಮೇ 26ರಂದು ಅವರು ದೇಶದ 14ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವವರಿದ್ದರು. ದೆಹಲಿಯಲ್ಲಿ ಸಖತ್ ಬ್ಯೂಸಿ ಶೆಡ್ಯೂಲ್ ಅವರದ್ದು..ಅದೇನಾದರೂ ಸರಿ, ತಮ್ಮ ಬದುಕಿನ ಮಹತ್ವದ ತಿರುವಿನ ಹೊತ್ತಲ್ಲಿ, ಎಷ್ಟೆಲ್ಲ ಕೆಲಸ ಕಾರ್ಯಗಳಿದ್ದರೂ ಅದನ್ನೆಲ್ಲ ಪಕ್ಕಕ್ಕಿಟ್ಟು, ಪ್ರಮಾಣ ವಚನ ಸ್ವೀಕಾರ ಮಾಡುವುದಕ್ಕೂ ಮೊದಲು ಅಮ್ಮನ ಆಶೀರ್ವಾದ ಪಡೆಯಲೇಬೇಕೆಂದು ಗುಜರಾತ್ನ ಗಾಂಧಿನಗರಕ್ಕೆ ಬಂದಿದ್ದರು ನರೇಂದ್ರ ಮೋದಿ..ಅಂದು ಮೊದಲ ಬಾರಿಗೆ ಈ ತಾಯಿ-ಮಗನ ನಂಟು ಹೊರಜಗತ್ತಿನ ಕಣ್ಣಿಗೆ ಬಿದ್ದಿತ್ತು.
‘ದೇಶವನ್ನಾಳಲು ಹೊರಟ ಮಗನಿಗೆ ಅಂದು ಹೀರಾಬೆನ್ ಸಿಹಿತುತ್ತು ಉಣ್ಣಿಸಿದ್ದರು, ಕರವಸ್ತ್ರದಿಂದ ಪುತ್ರನ ಬಾಯಿಯನ್ನು ಪ್ರೀತಿಯಿಂದ ಒರೆಸಿದ್ದರು. ಅವರ ಕೆನ್ನೆ ಹಿಡಿದು ಪ್ರೀತಿಯ ಸ್ಪರ್ಶಕೊಟ್ಟು, ತಲೆ ಮೇಲೆ ಕೈಯಿಟ್ಟು ಶುಭ ಹಾರೈಸಿದ್ದರು’-ಈ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು, ವಿಡಿಯೋಗಳೂ ವೈರಲ್ ಆಗಿದ್ದವು. ಅದನ್ನು ನೋಡಿದ ಅನೇಕಾನೇಕರು, ‘‘ಊರಿಗೆ ಅರಸನಾದರೂ ತಾಯಿಗೆ ಮಗ’ ಎಂಬ ಗಾದೆಯನ್ನು ಸುಮ್ಮನೆ ಮಾಡಿದ್ದಾರಾ? ಇದಕ್ಕೇ ನೋಡೀ ಹೇಳೋದು’’ ಎಂಬ ಮಾತನ್ನಾಡಿದ್ದರು.
ಅದಾದ ಮೇಲೆ ಅದೇ ವರ್ಷ ಸೆಪ್ಟೆಂಬರ್ 17ರಂದು ತಮ್ಮ 64ನೇ ವರ್ಷದ ಹುಟ್ಟುಹಬ್ಬದ ದಿನ ನರೇಂದ್ರ ಮೋದಿ ಮತ್ತೆ ಗುಜರಾತ್ಗೆ ಹೋಗಿ ತನ್ನಮ್ಮನ ಆಶೀರ್ವಾದ ಪಡೆದರು. ಅದಾಗಲೇ ಪ್ರಧಾನಮಂತ್ರಿಯಾಗಿದ್ದ ಅವರು ತೀರ ಸರಳವಾಗಿ, ಅಂದರೆ ಗುಜರಾತ್ನಿಂದ ಹೆಚ್ಚೇನೂ ಭದ್ರತೆಯಿಲ್ಲದೆ ಅಮ್ಮ ಇರುವ ಗಾಂಧಿನಗರದ ಮನೆಗೆ ಭೇಟಿ ಕೊಟ್ಟಿದ್ದರು. ಅಮ್ಮನ ಪಾದಸ್ಪರ್ಶಿಸಿ ನಮಸ್ಕರಿಸಿದ್ದರು. ಅವತ್ತು ಹೀರಾಬೆನ್ ತಮ್ಮ ಪುತ್ರನಿಗೆ ಹುಟ್ಟುಹಬ್ಬದ ಉಡುಗೊರೆಯನ್ನಾಗಿ 5001 ರೂಪಾಯಿ ನೀಡಿದ್ದರು. ತನ್ನ ಮಗ ಪ್ರಧಾನಿ ಎಂಬುದು ಆ ತಾಯಿಯ ಸರಳ ಮನಸ್ಸಿಗೆ ದೊಡ್ಡ ವಿಷಯ ಆಗಲೇ ಇಲ್ಲ. ತಾನೇ ಕೂಡಿಟ್ಟ ಹಣವನ್ನು ಮಗನ ಕೈಗಿತ್ತು ಸಂಭ್ರಮಿಸಿದ್ದರು. ಅಮ್ಮ ಕೊಟ್ಟ ಆ ಹಣವನ್ನು ಪ್ರಧಾನಿ ಮೋದಿ ನಂತರ ಜಮ್ಮು-ಕಾಶ್ಮೀರ ಪ್ರವಾಹ ಪರಿಹಾರ ನಿಧಿಗೆ ಕೊಟ್ಟಿದ್ದರು.
ನಂತರ, 2016ರಲ್ಲಿಯೂ ಮೋದಿ ತಮ್ಮ ಬರ್ತ್ ಡೇ ದಿನ ತಾಯಿ ಹೀರಾಬೆನ್ ಇದ್ದಲ್ಲಿಗೆ ಹೋಗಿ ಆಶೀರ್ವಾದ ಪಡೆದರು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಭೂತಪೂರ್ವವಾಗಿ ಗೆದ್ದ ಬಳಿಕ ಎರಡನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರುವ ಮೊದಲೂ ತಾಯಿ ಹೀರಾಬೆನ್ ಗೆ ಹೋಗಿ ನಮಿಸಿದರು. ಅದೇ ವರ್ಷ ಜನ್ಮದಿನವನ್ನೂ ಅಮ್ಮನೊಟ್ಟಿಗೇ ಆಚರಿಸಿಕೊಂಡರು. 2022ರ ಪ್ರಾರಂಭದಲ್ಲಿ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳನ್ನು ಬಿಜೆಪಿ ಗೆದ್ದುಕೊಂಡ ಬಳಿಕ ಮಾರ್ಚ್ನಲ್ಲಿ ಗುಜರಾತ್ಗೆ ಭೇಟಿ ಕೊಟ್ಟಿದ್ದ ಪ್ರಧಾನಿ ಮೋದಿ ಅಮ್ಮನನ್ನು ಭೇಟಿ ಮಾಡದೆ ವಾಪಸ್ ಬಂದಿಲ್ಲ. ತಾಯಿ ಇರುವ ಮನೆಗೆ ಹೋಗಿ, ಅವರೊಂದಿಗೆ ಮಾತನಾಡಿಕೊಂಡು, ಅವರೊಟ್ಟಿಗೆ ಕುಳಿತು ಊಟ ಮಾಡಿ ವಾಪಸ್ ಆಗಿದ್ದರು.
100ನೇ ಜನ್ಮದಿನದಂದು ಪಾದಪೂಜೆ
ಒಬ್ಬ ಪ್ರಧಾನಿ ತನ್ನ ಅಮ್ಮನ ಪಾದ ತೊಳೆದು ಪೂಜೆ ಮಾಡಿದ ಭಾವನಾತ್ಮಕ ಕ್ಷಣಕ್ಕೆ ಈ ದೇಶ ಸಾಕ್ಷಿಯಾಗಿದ್ದು ಇದೇ ವರ್ಷದ ಜೂನ್ 18ರಂದು. ಅಂದು ಹೀರಾಬೆನ್ರ 100ನೇ ವರ್ಷದ ಜನ್ಮದಿನ. ಅದನ್ನು ಪ್ರಧಾನಿ ಮೋದಿ ಥೇಟ್ ಹಬ್ಬವಾಗಿಸಿದರು. ಅಲ್ಲಿ ಅದ್ದೂರಿಯೆನ್ನುವಂಥದ್ದು ಏನೂ ಇರಲಿಲ್ಲ, ಆದರೆ ತಾಯಿ ಪ್ರೀತಿ ಎಂಬ ಅಧ್ಯಾತ್ಮವಿತ್ತು. ದೇಶದ ಪ್ರಧಾನಿ ತನ್ನ ಹುದ್ದೆ, ಜವಾಬ್ದಾರಿ, ಹಿರಿತನವನ್ನೆಲ್ಲ ಪಕ್ಕಕ್ಕಿಟ್ಟು ‘ಹೆತ್ತಮ್ಮನ ಪುತ್ರ’ನಷ್ಟೇ ಆಗಿದ್ದರು..! ಅಂದು ನರೇಂದ್ರ ಮೋದಿ ಅಮ್ಮ ಹೀರಾಬೆನ್ ಅವರ ಪಾದ ತೊಳೆದು, ಆ ನೀರನ್ನು ಕಣ್ಣಿಗೆ ಹಚ್ಚಿಕೊಂಡರು. ಆಕೆಯ ಪಾದಕ್ಕೆ ಪೂಜೆ ಮಾಡಿದರು. ಅವರ ಕೈಯಲ್ಲೇ ದೇವರಿಗೆ ಆರತಿಯನ್ನೂ ಮಾಡಿಸಿದರು. ಮಗನ ಕಾರ್ಯಗಳನ್ನೆಲ್ಲ ಮೌನವಾಗಿಯೇ ನೋಡುತ್ತಿದ್ದ ಹೀರಾಬೆನ್ ತಮ್ಮ ನಡಗುವ ಕೈಗಳಿಂದ ಪುತ್ರನಿಗೆ ಹರಸಿದ್ದರು.
ತಾಯಿಗೊಂದು ಪತ್ರ
ತಾಯಿ ಹೀರಾಬೆನ್ 100ನೇ ಜನ್ಮದಿನದಂದು ಪ್ರಧಾನಿ ಮೋದಿ ಅಮ್ಮನಿಗೊಂದು ಪತ್ರ ಬರೆದಿದ್ದರು. ‘ಅಮ್ಮಾ ಎಂಬುದು ಕೇವಲ ಒಂದು ಶಬ್ದವಲ್ಲ, ಅದು ಎಲ್ಲ ಭಾವನೆಗಳನ್ನೂ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ’ ಎಂದು ಪತ್ರವನ್ನು ಪ್ರಾರಂಭಿಸಿ ತನ್ನಮ್ಮನ ಬಗ್ಗೆ ಹಲವು ಸಂಗತಿ ಹಂಚಿಕೊಂಡಿದ್ದರು. ಹೀರಾಬೆನ್ ಪಟ್ಟ ಕಷ್ಟ, ಅವರ ಬದುಕಿನ ಹೋರಾಟ, ಬಡತನದಲ್ಲಿ ಬೇಯುತ್ತ ಜೀವಿಸಿದ ಪರಿಗಳನ್ನೆಲ್ಲ, ಓದುಗರ ಕಣ್ಣಂಚು ಒದ್ದೆಯಾಗುವಂತೆ ಬಿಚ್ಚಿಟ್ಟದ್ದರು. ಹಾಗೇ ತನ್ನ ತಂದೆಯನ್ನೂ ಅವರು ನೆನಪಿಸಿಕೊಂಡಿದ್ದರು. ‘ನನ್ನಮ್ಮನಿಗೆ ವಯಸ್ಸಾಗಿ ದೇಹ ಕ್ಷೀಣಿಸಿದೆ. ಆದರೆ ಮಾನಸಿಕವಾಗಿ ಅಂದಿನಷ್ಟೇ ಸದೃಢರಾಗಿದ್ದಾರೆ..ನನ್ನಮ್ಮ ಅಸಾಧಾರಣ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಸರಳತೆಯೇ ಮೈದುಂಬಿದ ಮಹಿಳೆ
ಪ್ರಧಾನಿ ಮೋದಿ ಮತ್ತು ಅವರ ತಾಯಿಯ ಆಪ್ತತೆಯನ್ನು ನೋಡಲು ತುಂಬ ಖುಷಿಯಾಗುತ್ತಿರುತ್ತದೆ. ಹೀರಾಬೆನ್ ಬಿಳಿಯಾದ ಸೀರೆಯನ್ನು ಗುಜರಾತಿ ಶೈಲಿಯಲ್ಲಿ ಉಟ್ಟಿರುತ್ತಾರೆ. ಅವರ ವಸ್ತ್ರವೆಷ್ಟು ಬಿಳಿಯೋ, ಮನಸೂ ಅಷ್ಟೇ ಶುಭ್ರ..ಸರಳ ಎಂಬುದು ಅವರನ್ನು ನೋಡಿದರೇ ಗೊತ್ತಾಗುತ್ತದೆ. ಗುಜರಾತ್ನ ಗಾಂಧಿನಗರದಲ್ಲಿರುವ ರಾಯ್ಸನ್ ಏರಿಯಾದಲ್ಲಿನ ಪಂಕಜ್ ಮೋದಿ ಮನೆಯಲ್ಲಿ ಅತ್ಯಂತ ಸಿಂಪಲ್ ಜೀವನ ನಡೆಸುತ್ತಿದ್ದಾರೆ. ನರೇಂದ್ರ ಮೋದಿಯವರೇ ಆಗಾಗ ಅಲ್ಲಿಗೆ ಹೋಗುತ್ತಾರೆ. ಹೀಗೆ ಮೋದಿ ತನ್ನಮ್ಮನನ್ನು ಭೇಟಿಯಾದಾಗಲೆಲ್ಲ ಅವರಿಬ್ಬರೂ ಅದೆಷ್ಟು ಆಪ್ತ ಸಮಯ ಕಳೆಯುತ್ತಾರೆ ಎಂದರೆ, ಮೋದಿ ತನಗೆ ಈಗಲೂ ಒಬ್ಬ ಪುಟ್ಟ ಮಗನೇ ಎಂಬಂತೆ ವರ್ತಿಸುತ್ತದೆ ಆ ಹಿರಿಯ ಜೀವ..ಒಟ್ಟಿಗೇ ಕುಳಿತು ಹೊಟ್ಟೆ ತುಂಬ ಊಟ ಮಾಡುತ್ತಾರೆ. ನಗುನಗುತ್ತ ಹರಟೆ ಹೊಡೆಯುತ್ತಾರೆ..
ನರೇಂದ್ರ ಮೋದಿ ದೆಹಲಿಗೆ ಹೋದಮೇಲೆ, 2016ರಲ್ಲಿ ಒಂದು ಸಲ ಹೀರಾಬೆನ್ ದೆಹಲಿಗೆ ತನ್ನ ಪುತ್ರನಿದ್ದಲ್ಲಿಗೆ ಹೋಗಿದ್ದರು. ಆಗಲೂ ಮೋದಿ ಸಂಭ್ರಮ ನೋಡುವಂತಿತ್ತು. ತನ್ನಮ್ಮನನ್ನು ವೀಲ್ಚೇರ್ನಲ್ಲಿ ಕೂರಿಸಿಕೊಂಡು ದೆಹಲಿಯ ತಮ್ಮ ನಿವಾಸದ ಸುತ್ತಲೂ ಸುತ್ತಾಡಿಸಿದ್ದರು. ಅವರು ವಾಪಸ್ ಗುಜರಾತ್ಗೆ ಹೋದ ಮೇಲೆ ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದ ಪ್ರಧಾನಿ ಮೋದಿ, ಮೂರು ಫೋಟೋಗಳನ್ನೂ ಪೋಸ್ಟ್ ಮಾಡಿದ್ದರು.
ಅಷ್ಟೇನೂ ಖುಷಿಪಟ್ಟಿರಲಿಲ್ಲ ತಾಯಿ !
ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಪ್ರಧಾನಿ ಹುದ್ದೆಗೆ ಬಡ್ತಿ ಪಡೆದಾಗ ಅವರ ತಾಯಿ ಅಷ್ಟೇನೂ ದೊಡ್ಡಮಟ್ಟದಲ್ಲಿ ಸಂತೋಷ ವ್ಯಕ್ತಪಡಿಸಿರಲಿಲ್ಲವಂತೆ. ಮಗನ ಸಾಧನೆ, ಜನಪ್ರಿಯತೆಗಿಂತಲೂ ಅವರನ್ನು ಆ ಕ್ಷಣ ಕಾಡಿದ್ದು, ಇನ್ನು ಪುತ್ರ ದೂರದ ದೆಹಲಿಗೆ ಹೋಗಿಬಿಡುತ್ತಾನಲ್ಲ ಎಂಬ ಸಹಜ ನೋವು. ಹಾಗಂತ, ಅವರು ಬೇಸರಿಸಿದ್ದರು..ದುಃಖಿಸಿದ್ದರು ಎಂದಲ್ಲ. ತಮ್ಮ ಭಾವನೆಯನ್ನು ಸಮತೋಲಿತವಾಗಿ, ಪ್ರಬುದ್ಧವಾಗಿ ಮೋದಿಯವರ ಎದುರು ಹೊರಹಾಕಿದ್ದರಂತೆ. ಈ ಬಗ್ಗೆ ಹಿಂದೊಮ್ಮೆ ನರೇಂದ್ರ ಮೋದಿ ಹ್ಯೂಮನ್ ಬಾಂಬೆ ಎಂಬ ಫೋಟೋಬ್ಲಾಗ್ಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
‘ಗುಜರಾತ್ ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ದೆಹಲಿಯಲ್ಲಿಯೇ ಹೆಚ್ಚಾಗಿ ವಾಸಿಸುತ್ತಿದ್ದೆ. ಹಾಗೇ 2001ರಲ್ಲಿ ನಾನು ಗುಜರಾತ್ ಮುಖ್ಯಮಂತ್ರಿ ಎಂಬುದು ನಿಶ್ಚಯವಾಯಿತು. ಅದಾಗಲೇ ಪೇಪರ್, ಟಿವಿಗಳಲ್ಲಿ ನನ್ನ ಬಗ್ಗೆಯೇ ಸುದ್ದಿ ಬಿತ್ತರವಾಗುತ್ತಿತ್ತು. ನನ್ನಮ್ಮನಿಗೂ ಗೊತ್ತಿತ್ತು, ತನ್ನ ಮಗ ಗುಜರಾತ್ನ ಉನ್ನತ ಹುದ್ದೆಗೆ ಏರುತ್ತಿದ್ದಾನೆ ಎಂಬುದು. ದೆಹಲಿಯಿಂದ ಅಹ್ಮದಾಬಾದ್ಗೆ ಬಂದೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ಹೋಗಿ ಅವರನ್ನು ಭೇಟಿಯಾದೆ. ನಾನಂದುಕೊಂಡೆ, ಅಮ್ಮ ನನ್ನ ಸಾಧನೆ ಬಗ್ಗೆ ಮಾತನಾಡುತ್ತಾರೆಂದು. ಆದರೆ ಆಕೆ ನನ್ನ ನೋಡಿದರು, ಪ್ರೀತಿಯಿಂದ ಅಪ್ಪಿಕೊಂಡರು..ಬಳಿಕ ‘ನೀನೀಗ ವಾಪಸ್ ಗುಜರಾತ್ಗೆ ಬಂದೆಯಲ್ಲ, ಅದು ನನ್ನ ಪಾಲಿಗೆ ದೊಡ್ಡ ಸಂತೋಷ’ ಎಂದು ಹೇಳಿದರು. ಆ ಮಾತುಗಳನ್ನೆಂದೂ ಮರೆಯೋದಿಲ್ಲ. ತಾಯಿ ಅಂದರೇ ಹಾಗಲ್ಲವೇ, ಮಕ್ಕಳು ಸದಾ ತನ್ನ ಬಳಿಯೇ ಇರಲಿ ಎಂದು ಬಯಸುತ್ತಾಳೆ..ನನ್ನಮ್ಮನೂ ಹಾಗೇ. ಆಕೆಗೆ ನಾನು ಸಿಎಂ ಆಗುತ್ತಿದ್ದೆನೆ ಎಂಬುದಕ್ಕಿಂತ, ಮತ್ತೆ ಗುಜರಾತ್ಗೆ ಬರುತ್ತೇನೆ ಎಂಬುದೇ ದೊಡ್ಡ ವಿಷಯವಾಗಿತ್ತು’ ಎಂದು ನರೇಂದ್ರ ಮೋದಿ ಹೇಳಿಕೊಂಡಿದ್ದರು.
ಅಹಂ ಇರಲೇ ಇಲ್ಲ !
ಮಗ ಪ್ರಧಾನಿಯಾದರೂ ತಾಯಿ ಹೀರಾಬೆನ್ ಅದೆಷ್ಟು ಸಾಮಾನ್ಯರಂತೆ ಜೀವನ ನಡೆಸುತ್ತಾರೆ ಎಂಬುದನ್ನೂ ದೇಶ ನೋಡಿದೆ. ನರೇಂದ್ರ ಮೋದಿಯವರು ರಾತ್ರಿ ಭಾಷಣ ಮಾಡಿ, ‘ನಾಳೆಯಿಂದ 500 ಮತ್ತು 1000 ರೂಪಾಯಿ ನೋಟುಗಳು ಚಲಾವಣೆಯಾಗುವುದಿಲ್ಲ’ ಎಂದು 2018ರ ನವೆಂಬರ್ನಲ್ಲಿ ಆದೇಶ ಹೊರಡಿಸಿದಾಗ ಅದರ ಬಿಸಿ ಇಡೀ ದೇಶಕ್ಕೆ ತಟ್ಟಿತ್ತು. ಕೊಟ್ಟ ಅವಧಿಯಲ್ಲಿ ಇರುವ ನೋಟುಗಳನ್ನು ಬದಲಿಸಿಕೊಳ್ಳಬೇಕಿತ್ತು. ಆಗ ಅವರ ತಾಯಿ ಹೀರಾಬೆನ್ ಕೂಡ ಎಲ್ಲರಂತೆ ಗುಜರಾತ್ನ ಬ್ಯಾಂಕ್ವೊಂದಕ್ಕೆ ಹೋಗಿ, ಸರತಿ ಸಾಲಿನಲ್ಲಿ ನಿಂತು ನೋಟು ಬದಲಿಸಿಕೊಂಡಿದ್ದರು.
ಪ್ರತಿ ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮತಗಟ್ಟೆಗೆ ಹೋಗಿ ಮತಚಲಾಯಿಸುತ್ತಾರೆ. ವಯಸ್ಸು ನೂರಾದರೂ ಇಂಥ ವಿಚಾರಗಳಲ್ಲಿ ಅವರ ಉತ್ಸಾಹ ಕುಂದಿಲ್ಲ. ಹೀರಾಬೆನ್ರ ಈ ಸರಳತೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಬಂದಿದೆ. ಅವರೂ ಸಹ ಜನಸಾಮಾನ್ಯರ ಪ್ರಧಾನಿ ಎನ್ನಿಸಿಕೊಂಡಿದ್ದಾರೆ. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಈ ವಿಚಾರದಲ್ಲೂ ಅವರು ಪಕ್ಕಾ ‘ಅಮ್ಮನ ಮಗನೇ..’
ಈ ಸಲ ಅಮ್ಮನತ್ರ ಹೋಗೋಕಾಗಿರಲಿಲ್ಲ !
ಈ ಸಲದ ಹುಟ್ಟುಹಬ್ಬದ ದಿನ ನರೇಂದ್ರ ಮೋದಿಯವರಿಗೆ ಅಮ್ಮನಿದ್ದಲ್ಲಿಗೆ ಹೋಗಿ ಆಶೀರ್ವಾದ ಪಡೆಯೋಕೆ ಆಗಿರಲಿಲ್ಲ. ಸೆ.17ರಂದು ಬೆಳಗ್ಗೆಯೇ ಅವರು ಮಧ್ಯಪ್ರದೇಶದ ಗ್ವಾಲಿಯರ್ಗೆ ಹೋಗಿ, ಅಲ್ಲಿ ನಮೀಬಿಯಾದಿಂದ ಬಂದ ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರು. ಬಳಿಕ ಮಾತನಾಡಿದ ಅವರು ಅಲ್ಲೂ ತನ್ನಮ್ಮನನ್ನು ನೆನಪಿಸಿಕೊಂಡಿದ್ದಾರೆ. ‘ನಾನಿವತ್ತು ಗುಜರಾತ್ಗೆ ಹೋಗಿ ಅಮ್ಮನ ಆಶೀರ್ವಾದ ಪಡೆಯಬೇಕಿತ್ತು. ಅದಾಗುತ್ತಿಲ್ಲ.. ಆದರೂ ಲಕ್ಷಾಂತರ ತಾಯಂದಿರ ಆಶೀರ್ವಾದ ನನ್ನ ಮೇಲಿದೆ ಎಂಬ ಸಮಾಧಾನ ನನಗೆ ಇದೆ’ ಎಂದು ಹೇಳಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ನರೇಂದ್ರ ಮೋದಿಯವರು ತಮ್ಮ ಬದುಕಿನ ಮಹತ್ವದ ಹಂತದಲ್ಲೆಲ್ಲ ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ‘ಅಮ್ಮನ ಕರುಳ ಕೂಗು ಮಕ್ಕಳು ಎಲ್ಲಿದ್ದರೂ ಕರೆದೇ ಕರೆಯುತ್ತದೆ..ಈ ಭಾವದಿಂದ ತಪ್ಪಿಸಿಕೊಳ್ಳಲು ದೇಶದ ಪ್ರಧಾನಿಗೂ ಸಾಧ್ಯವಿರಲಿಲ್ಲ ನೋಡಿ..! ಈಗ ಅಮ್ಮ ಹೀರಾಬೆನ್ ತನ್ನ ಮಗನಿಗೆ ಶಾಶ್ವತವಾಗಿ ಆಶೀರ್ವದಿಸಿ ಹೋಗಿದ್ದಾರೆ.
ಇದನ್ನೂ ಓದಿ : Narendra Modi : ಭಾರತಕ್ಕೆ ಚೀತಾಗಳು ಎಂಟ್ರಿ : ಪ್ರಧಾನಿ ಮೋದಿ ಹೇಳಿದ್ದೇನು?