ಡೆಹ್ರಾಡೂನ್: ಹಲವಾರು ಪ್ರದೇಶಗಳಲ್ಲಿ ಮಳೆ ರುದ್ರನರ್ತನವನ್ನು ಆರಂಭಿಸಿದೆ. ಅದೇ ರೀತಿಯಲ್ಲಿ ಉತ್ತರಾಖಂಡದಲ್ಲಿಯೂ (Uttarakhand) ಭಾರೀ ಮಳೆ ಸುರಿಯುತ್ತಿದೆ. ರಾಜ್ಯದ ಪಿಥೋರಗಢ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದೆ. ಇದರಿಂದಾಗಿ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ.
ಜಿಲ್ಲೆಯ ಧಾರ್ಚುಲಾ ಪಟ್ಟಣದ ಚಾಲ್ ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯೇ ಕೊಚ್ಚಿಕೊಂಡು ಹೋಗಿರುವುದರಿಂದಾಗಿ ಗ್ರಾಮದಲ್ಲಿರುವ ನೂರಾರು ಜನರು ಪರದಾಡುವಂತಾಗಿದೆ. ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Weather Report : ಬೆಂಗಳೂರಿಗರು ಗಡಗಡ, ಕರಾವಳಿಗರು ತತ್ತರ; ಹೇಗಿರಲಿದೆ ಇಂದು ಮಳೆಯ ಅಬ್ಬರ
ಉತ್ತರಾಖಂಡದ ಕೆಲವು ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಗುರುವಾರ ಎಚ್ಚರಿಕೆ ನೀಡಿದೆ. ಹಾಗೆಯೇ ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನಲ್ಲಿಯೂ ಭಾರೀ ಮಳೆಯ ಸಾಧ್ಯೆತೆಯಿದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
ಉತ್ತರಾಖಂಡದಲ್ಲಿ ಮುಂಗಾರು ಮಳೆ ಆರಂಭವಾದಾಗಿನಿಂದ ಧಾರಾಕಾರ ಮಳೆಯಾಗುತ್ತಿದೆ. ರಾಜ್ಯಾದ್ಯಂತ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಭೂಕುಸಿತಗಳು ಭಾರಿ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ರಸ್ತೆಗೆ ಅಪಾರ ಪ್ರಮಾಣದ ಅವಶೇಷಗಳು, ಕಲ್ಲುಗಳು ಬಿದ್ದಿದ್ದು, ರಸ್ತೆ ಸಂಪೂರ್ಣ ಬಂದ್ ಆಗಿದೆ.