ನವದೆಹಲಿ: ಕೇಂದ್ರ ಸರ್ಕಾರವು ಫೆ.1ರಂದು ಬಜೆಟ್ (Budget 2023) ಮಂಡಿಸುವುದಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಬಾರಿ ಮಧ್ಯಮ ವರ್ಗದ ಜನರನ್ನು ಕೇಂದ್ರೀಕರಿಸಿಕೊಂಡು ಬಜೆಟ್ ರೂಪಿಸಿ ಎಂದು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ವು ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
“ಸರ್ಕಾರವು ನೋಟು ಅಮಾನ್ಯೀಕರಣ ಮಾಡಿದಾಗ ಹಾಗೂ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಮಧ್ಯಮ ವರ್ಗದ ಜನರು ಸರ್ಕಾರದೊಂದಿಗೆ ನಿಂತಿದ್ದರು. ಈಗ ಅವರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಿದೆ. ಆ ನಿಟ್ಟಿನಲ್ಲಿ ಮಧ್ಯಮ ವರ್ಗಕ್ಕೆ ಸಹಕಾರಿಯಾಗುವಂತಹ ಬಜೆಟ್ ರೂಪಿಸಿ” ಎಂದು ಆರ್‌ಎಸ್‌ಎಸ್‌ನ ಹಿರಿಯರು ಬಿಜೆಪಿಗೆ ಸಲಹೆ ನೀಡಿದ್ದಾರೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಹಾಗೂ ನಿರುದ್ಯೋಗದ ಸಮಸ್ಯೆಯಿಂದ ಮಧ್ಯಮ ವರ್ಗದ ಜನರು ಬಳಲಿದ್ದಾರೆ. ಈ ವಿಚಾರದಲ್ಲಿ ಜನರು ಸಂಘಟನೆಯವರ ಬಳಿಯೂ ತಮ್ಮ ಅಳಲನ್ನು ಹಂಚಿಕೊಂಡಿದ್ದು, ಅದನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಂಘಟನೆ ಹೇಳಿದೆ.
ಇದನ್ನೂ ಓದಿ: Budget 2023 | ಮೊದಲ ಬಜೆಟ್, ರೋಲ್‌ಬ್ಯಾಕ್ ಬಜೆಟ್, ಮಿಲೇನಿಯಂ ಬಜೆಟ್, ಡ್ರೀಮ್ ಬಜೆಟ್..!
ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯದರ್ಶಿಗಳಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಇತ್ತೀಚೆಗೆ ಮಧ್ಯಮ ವರ್ಗದ ಜನರ ಬಗ್ಗೆ ಮಾತನಾಡಿದ್ದು, ದೇಶದಲ್ಲಿನ ನಿರುದ್ಯೋಗ ಸಮಸ್ಯೆ, ಬಡತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಬಿಜೆಪಿ ನಾಯಕರಿಗೂ ಕೂಡ ಆಶ್ಚರ್ಯ ತಂದಿತ್ತು.