Site icon Vistara News

Building Collapsed: ಭಾರೀ ಮಳೆಗೆ ನಾಲ್ಕು ಅಂತಸ್ತಿಗೆ ಕಟ್ಟಡ ಧರಾಶಾಹಿ; ಮಹಿಳೆ ಬಲಿ

Building Collapsed

ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ(Building Collapsed) ವೊಂದು ಏಕಾಏಕಿ ಕುಸಿದು ಬಿದ್ದಿದು, ಮಹಿಳೆಯೊಬ್ಬಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮುಂಬೈ(Mumbai) ನಲ್ಲಿ ನಡೆದಿದೆ. ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ಕಟ್ಟಡವೊಂದರ ಮುಂಭಾಗದ ಭಾಗ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

ನಾಲ್ಕು ಅಂತಸ್ತಿನ ರುಬಿನಿಸಾ ಮಂಜಿಲ್ ಕಟ್ಟಡದ ಎರಡು ಮತ್ತು ಮೂರನೇ ಮಹಡಿಯ ಭಾಗಗಳು ಬಾಲ್ಕನಿಯೊಂದಿಗೆ ಬೆಳಗ್ಗೆ ಕುಸಿದು ಬಿದ್ದಿವೆ. ಕಟ್ಟಡ ಕುಸಿತದ ವೇಳೆ ಸುಮಾರು 35-40 ಮಂದಿ ಕಟ್ಟಡದಲ್ಲಿದ್ದರು. ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅವಶೇಷಗಳಡಿಯಲ್ಲಿ ಕಾಲು ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸಲು ಸ್ಥಳೀಯರು ಕಾಂಕ್ರೀಟ್ ಚಪ್ಪಡಿಗಳನ್ನು ಎತ್ತುತ್ತಿರುವ ದೃಶ್ಯಗಳು ಸ್ಥಳದಿಂದ ಕಂಡುಬಂದಿವೆ.

ಕಟ್ಟಡದ ಮುಂಭಾಗದ ಭಾಗವು ಇನ್ನೂ ಅಸ್ಥಿರವಾಗಿ ನೇತಾಡುತ್ತಿದೆ. ಪೊಲೀಸರು ಮತ್ತು ಆಂಬ್ಯುಲೆನ್ಸ್‌ಗಳೊಂದಿಗೆ ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಕಟ್ಟಡ ಕುಸಿದಿದೆ ಎನ್ನಲಾಗಿದೆ.

ಇನ್ನು ಅವಶೇಷದಡಿಯಲ್ಲಿ ಇನ್ನಷ್ಟು ಜನ ಸಿಲುಕಿರುವ ಬಗ್ಗೆ ಮಾಹಿತಿ ದೊರೆತಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ಮುಂದುರವರಿದಿದೆ. ಕಟ್ಟಡದಲ್ಲಿದ್ದ ಅನೇಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ. ಇನ್ನು ಈ ಕಟ್ಟಡ ಅತ್ಯಂತ ಹಳೆಯ ಕಟ್ಟಡವಾಗಿರುವ ಕಾರಣ ಅದನ್ನು ಸಂಪೂರ್ಣವಾಗಿ ತೆರವು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಮುಂಬೈನಲ್ಲಿ ಕಳೆದ ಹಲವು ವಾರಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯವಸ್ತವಾಗಿದೆ. ತಗ್ಗು ಪ್ರದೇಶಗಳಿಗೆ ಶುಕ್ರವಾರ ನೀರು ಹರಿದು ವಾಹನ ಸಂಚಾರಕ್ಕೆ ಭಾರೀ ಅಡ್ಡಿಯಾಗಿತ್ತು.

ಇದನ್ನೂ ಓದಿ: Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

Exit mobile version