ಕುಲ್ಲು: ಹಿಮಾಚಲಪ್ರದೇಶದ ಕುಲ್ಲು ಜಿಲ್ಲೆಯ ಸೈನ್ಜ್ ಕಣಿವೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಬಸ್ ಅಪಘಾತವಾಗಿದೆ. ೪೫ ಜನ ಪ್ರಯಾಣಿಕರಿದ್ದ ಖಾಸಗಿ ಬಸ್ ಕಂದಕಕ್ಕೆ ಉರುಳಿಬಿದ್ದು, ಶಾಲಾ ಮಕ್ಕಳೂ ಸೇರಿ 16 ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಈ ಬಸ್ ರಸ್ತೆಯಿಂದ ಉರುಳಿ ಕಂದಕದಲ್ಲಿ ಇರುವ ಕಲ್ಲುಬಂಡೆಯ ಮೇಲೆ ಬಿದ್ದು ಅಪ್ಪಚ್ಚಿಯಾಗಿದೆ. ಕುಲ್ಲುದಿಂದ ನಿಯೋಲಿ-ಶಂಶೇರ್ ರಸ್ತೆ ಮೂಲಕ ಸೈಂಜ್‌ಗೆ ಸಂಚಾರ ಮಾಡುತ್ತಿದ್ದ ಖಾಸಗಿ ಬಸ್ ಬೆಳಗ್ಗೆ 8ಗಂಟೆ ವೇಳೆ ಕಂದಕಕ್ಕೆ ಬಿದ್ದಿದೆ ಎಂದು ಕುಲ್ಲು ಜಿಲ್ಲಾಧಿಕಾರಿ ಅಶುತೋಶ್ ಗಾರ್ಗ್ ತಿಳಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಕಾಲುವೆಗೆ ಬಿದ್ದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
2019ರ ಜೂ.20 ರಂದು ಕೂಡ ಕುಲ್ಲು ಜಿಲ್ಲೆಯಲ್ಲಿ ಭಯಾನಕ ಅಪಘಾತವಾಗಿತ್ತು. ಬಂಜಾರ ತೆಹ್ಸಿಲ್‌ನ ಧೋತ್ ಮಾರ್ಚ್‌ನಲ್ಲಿ ಆಳವಾದ ಕಣಿವೆಗೆ ಬಸ್ ಬಿದ್ದಿತ್ತು. ಆಗ 44 ಮಂದಿ ಮೃತಪಟ್ಟಿದ್ದರು. 34ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಬಸ್ ಸಾಮರ್ಥ್ಯಕ್ಕಿಂತ ಜಾಸ್ತಿ ಪ್ರಯಾಣಿಕರನ್ನು ತುಂಬಿತ್ತು. ಕುಲ್ಲುವಿನಿಂದ ಗಡಗುಶನೈಗೆ ತೆರಳುತ್ತಿತ್ತು. ಅದಾದ ಮೇಲೆ ಇಂದು ನಡೆದ ಅಪಘಾತವೇ ಭೀಕರ ಎನ್ನಿಸಿದೆ. ಇಂದು ಬಿದ್ದ ಬಸ್‌ನಲ್ಲಿ ಒಟ್ಟಾರೆ 45 ಮಂದಿಯಲ್ಲಿ 40 ಮಂದಿ ವಿದ್ಯಾರ್ಥಿಗಳೇ ಇದ್ದರು ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಲಾರಿ-ಖಾಸಗಿ ಬಸ್ ಡಿಕ್ಕಿಯಾಗಿ 8 ಮಂದಿ ಸಾವು