ಧಾರ್: ಮಧ್ಯಪ್ರದೇಶದ ಇಂಧೋರ್‌ನಿಂದ ಪುಣೆಗೆ ತೆರಳುತ್ತಿದ್ದ ಸರ್ಕಾರಿ ಬಸ್ ನರ್ಮದಾ ನದಿಗೆ ಬಿದ್ದು(Bus Fell Into River), 13 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. 15 ಜನರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆ ನಡೆದಿರುವುದು ಧಾರ್ ಮತ್ತು ಖರ್ಗೋನೆ ಜಿಲ್ಲೆಗಳ ಗಡಿ ಭಾಗದಲ್ಲಿನ ಆಗ್ರಾ-ಮುಂಬೈ ಹೈವೇಯಲ್ಲಿರುವ ಖಲ್‌ಘಾಟ್‌ನ ಸಂಜಯ್ ಸೇತು ಸೇತುವೆಯ ಬಳಿ. ಇಂಧೋರ್‌ನಿಂದ 80 ಕಿಮೀ ದೂರದಲ್ಲಿ ಇರುವ ಈ ಬ್ರಿಜ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇತುವೆಗೆ ಬದಿಯಲ್ಲಿ ಹಾಕಿದ್ದ ಬೇಲಿಯನ್ನು ಮುರಿದು ನದಿಗೆ ಬಿದ್ದಿದೆ.
ಬಸ್‌ನಲ್ಲಿ ಒಟ್ಟು 40 ಪ್ರಯಾಣಿಕರು ಇದ್ದರು. ಸದ್ಯ 8 ಪುರುಷರು, 4 ಮಹಿಳೆಯರು ಮತ್ತು 1 ಮಗುವಿನ ಮೃತದೇಹ ಪತ್ತೆಯಾಗಿದೆ. ಇವರ ಗುರುತು ಪತ್ತೆಯಾಗಿಲ್ಲ. ಬಸ್ ಬಿದ್ದ ಸ್ಥಳದಲ್ಲಿ ಆಂಬುಲೆನ್ಸ್ ಸಿಬ್ಬಂದಿ , ರಕ್ಷಣಾ ಸಿಬ್ಬಂದಿ, ಎನ್‌ಡಿಆರ್‌ಎಫ್ ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಂದಹಾಗೇ ಈ ಬಸ್ ಮಹಾರಾಷ್ಟ್ರ ರಾಜ್ಯ ಸರ್ಕಾರ ರಸ್ತೆ ಸಾರಿಗೆಗೆ ಸೇರಿದ್ದಾಗಿದೆ. ಖಲ್‌ಘಾಟ್‌ನ ಈ ಸೇತುವೆ ಮೇಲೆ ಮತ್ತೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಚಾಲಕ ನಿಯಂತ್ರಣ ತಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಸೇತುವೆ ಕೂಡ ತುಂಬ ಹಳೆಯದು ಎನ್ನಲಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ʼದುರ್ಘಟನೆ ನಡೆದ ಸ್ಥಳದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದಾರೆ. ನಾನೂ ಕೂಡ ಖರ್ಗೋನೆ ಮತ್ತು ಧಾರ್ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಸಂಪೂರ್ಣ ವರದಿ ಪಡೆದಿದ್ದೇನೆ. ಗಾಯಗೊಂಡವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆʼ ಎಂದು ಹೇಳಿದ್ದಾರೆ. ಹಾಗೇ, ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕಾಶಿಯಲ್ಲಿ ಕಮರಿಗೆ ಉರುಳಿದ ಬಸ್, 25 ಮಂದಿ ಚಾರ್ ಧಾಮ್ ಯಾತ್ರಿಕರು ಮೃತ್ಯು