Site icon Vistara News

ತಮ್ಮ 600 ಕೋಟಿ ರೂ. ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಿದ ಉದ್ಯಮಿ; ಆ ಒಂದು ಘಟನೆ ಕಾರಣ

arvind kumar goyal

ಲಖನೌ: ಉತ್ತರ ಪ್ರದೇಶ ಮೊರಾದಾಬಾದ್‌ನ ವೈದ್ಯರೊಬ್ಬರು ತಮ್ಮ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ದೇಣಿಗೆಯ ರೂಪದಲ್ಲಿ ಕೊಟ್ಟಿದ್ದಾರೆ. ಇವರ ಹೆಸರು ಅರವಿಂದ್‌ ಕುಮಾರ್‌ ಗೋಯಲ್‌ ಎಂದಾಗಿದ್ದು, ಕಳೆದ 50ವರ್ಷಗಳಿಂದಲೂ ವೃದ್ಯ ವೃತ್ತಿಯಲ್ಲಿ ತೊಡಗಿದ್ದಾರೆ. ಅವರೀಗ ಉತ್ತರ ಪ್ರದೇಶ ಸರ್ಕಾರಕ್ಕೆ ದೇಣಿಗೆ ನೀಡಿದ ಒಟ್ಟಾರೆ ಆಸ್ತಿಯ ಮೊತ್ತ 600 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಸರ್ಕಾರ ಈ ಹಣವನ್ನು ಬಡವರ ಕಲ್ಯಾಣಕ್ಕೆ ಬಳಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ಮೊರಾದಾಬಾದ್ ಸಿವಿಲ್ ಲೈನ್ಸ್‌ನಲ್ಲಿರುವ ತಮ್ಮ ಮನೆಯನ್ನು ಮಾತ್ರ ಉಳಿಸಿಕೊಂಡಿದ್ದಾರೆ.

ಅರವಿಂದ್‌ ಕುಮಾರ್‌ ಗೋಯಲ್‌ ಅವರು ಬರಿ ವೈದ್ಯರಷ್ಟೇ ಅಲ್ಲ, ಇವರು ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಸೇರಿ ಹಲವರು ರಾಜ್ಯಗಳ ಸುಮಾರು 100 ಶಿಕ್ಷಣ ಸಂಸ್ಥೆಗಳಿಗೆ ಗೋಯಲ್‌ ಟ್ರಸ್ಟಿ. ಈ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಸೇವೆ ಸಲ್ಲಿಸುತ್ತಿದ್ದಾರೆ. ಅನಾಥಾಶ್ರಮ, ವೃದ್ಧಾಶ್ರಮಗಳಿಗೂ ನಿರಂತರವಾಗಿ ನೆರವು ನೀಡುತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಸುಮಾರು 50 ಹಳ್ಳಿಗಳನ್ನು ದತ್ತು ಪಡೆದು, ಅಲ್ಲಿನವರಿಗೆ ಆಹಾರ, ಔಷಧಿ ಸೇರಿ ಇತರ ಅಗತ್ಯತೆಗಳನ್ನು ಪೂರೈಸಿದ್ದರು.

ಡಾ. ಗೋಯಲ್‌ ಅವರ ಇಷ್ಟು ದೊಡ್ಡ ನಿರ್ಧಾರವನ್ನು ಅವರ ಪತ್ನಿ ರೇಣು ಗೋಯಲ್‌, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಸಂತೋಷದಿಂದಲೇ ಒಪ್ಪಿಕೊಂಡಿದ್ದಾರೆ. ಅರವಿಂದ್‌ ಕುಮಾರ್‌ ಗೋಯಲ್‌ ದಂಪತಿ ಮತ್ತು ಅವರ ಕಿರಿಯ ಪುತ್ರ ಶುಭಮ್‌ ಪ್ರಕಾಶ್‌ ಮೊರಾದಾಬಾದ್‌ನಲ್ಲೇ ಇದ್ದು ಉದ್ಯಮ ನಡೆಸುತ್ತಿದ್ದಾರೆ. ಹಿರಿಯ ಪುತ್ರ ಮಧುರ್‌ ಗೋಯಲ್‌ ಮುಂಬೈನಲ್ಲಿದ್ದಾರೆ. ಪುತ್ರಿಗೆ ವಿವಾಹವಾಗಿದ್ದು ಬರೇಲಿಯಲ್ಲಿ ನೆಲೆಸಿದ್ದಾರೆ.

ಇದೀಗ 600 ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ನೀಡಿರುವ ಅರವಿಂದ್‌ ಕುಮಾರ್‌ ಗೋಯಲ್‌, ಈ ನಿರ್ಧಾರ ಮಾಡಿದ್ದು 25 ವರ್ಷಗಳ ಹಿಂದೆಯೇ ಅಂತೆ. ಅದಕ್ಕೊಂದು ಕಾರಣವೂ ಇದೆ ಎಂದು ಹೇಳಿರುವ ಅವರು, ಅದನ್ನೀಗ ಎಲ್ಲರೆದುರು ಹಂಚಿಕೊಂಡಿದ್ದಾರೆ. ʼ25ವರ್ಷಗಳ ಹಿಂದಿನ ಮಾತು. ಡಿಸೆಂಬರ್‌ ತಿಂಗಳಲ್ಲಿ ನಾನು ರೈಲಿನಲ್ಲಿ ಎಲ್ಲಿಗೋ ಹೋಗುತ್ತಿದ್ದೆ. ರೈಲು ಇಳಿಯುತ್ತಿದ್ದಂತೆ ವ್ಯಕ್ತಿಯೊಬ್ಬ ನನ್ನೆದುರು ಬಂದ. ಅವನ ಉಡುಪು, ಅವನಿದ್ದ ಸ್ಥಿತಿಯೇ ಹೇಳುತ್ತಿತ್ತು ಆ ವ್ಯಕ್ತಿ ತುಂಬ ಬಡವ ಎಂಬುದನ್ನು. ಆ ಡಿಸೆಂಬರ್‌ನ ಚಳಿಯಲ್ಲಿ ಆತ ಗಡಗಡನೆ ನಡುಗುತ್ತಿದ್ದ. ಅವನಿಗೆ ಹೊದೆಯಲು ಒಂದು ಬೆಡ್‌ಶೀಟ್‌ ಇಲ್ಲ. ಕಾಲಲ್ಲಿ ಚಪ್ಪಲಿ ಇರಲಿಲ್ಲ. ಆತನನ್ನು ನೋಡಿ ನನಗೆ ಕಣ್ಣೀರು ಬಂತು. ಕೂಡಲೇ ನನ್ನ ಶೂ ತೆಗೆದು ಅವನಿಗೆ ಕೊಟ್ಟೆ. ಕಾಲಿ ಚಪ್ಪಲು ಇಲ್ಲದಿದ್ದರೆ ಏನಾಗುತ್ತದೆ ಎಂಬುದು ಆಗ ನನ್ನ ಅರಿವಿಗೆ ಬಂತು. ಆದರೆ ನನ್ನ ಮನಸಲ್ಲಿ ಒಂದು ವಿಷಯ ಕೊರೆಯುತ್ತಲೇ ಇತ್ತು. ನಾನು ಇವನೊಬ್ಬನಿಗೆ ಶೂ ಕೊಟ್ಟೆ. ಇವನಂಥ ಬಡವರು ಇನ್ನೆಷ್ಟು ಜನ ಇರಬಹುದು? ಅವರಿಗೆಲ್ಲ ಎಷ್ಟು ಕಷ್ಟ ಆಗುತ್ತಿರಬಹುದು ಎಂದು ಯೋಚಿಸುತ್ತಿದ್ದೆ. ಹಾಗಾಗಿ ಅಂದಿನಿಂದಲೇ ನಾನು ಬಡವರಿಗೆ ಸಹಾಯ ಮಾಡಲು ಶುರು ಮಾಡಿದೆ. ನನ್ನ ಆಸ್ತಿಯನ್ನೂ ದಾನ ಮಾಡಲು ನಿರ್ಧರಿಸಿದ್ದೆʼ ಎಂದು ಹೇಳಿಕೊಂಡಿದ್ದಾರೆ.

ಡಾ. ಗೋಯಲ್‌ ಹುಟ್ಟಿದ್ದು ಮೊರಾದಾಬಾದ್‌ನಲ್ಲಿ. ಇವರ ತಂದೆ ಪ್ರಮೋದ್‌ ಕುಮಾರ್‌ ಮತ್ತು ತಾಯಿ ಶಕುಂತಲಾ ದೇವಿ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು. ಇವರ ಮಾವ ಸೇನೆಯಲ್ಲಿ ಜಡ್ಜ್‌ ಆಗಿದ್ದರೆ, ಅಳಿಯ ಕರ್ನಲ್‌. ಅರವಿಂದ್‌ ಕುಮಾರ್‌ ಗೋಯಲ್‌ ಸದಾ ಬಡಜನರ ಸೇವೆ ಮಾಡಿಕೊಂಡೇ ಬಂದವರು. ಇವರ ಈ ಸೇವೆಗೆ ಹಲವು ಪುರಸ್ಕಾರಗಳೂ ದೊರೆತಿವೆ. ಮಾಜಿ ಪ್ರಧಾನಿಗಳಾದ ಅಬ್ದುಲ್‌ ಕಲಾಂ ಅಜಾದ್‌, ಪ್ರತಿಭಾ ದೇವಿ ಪಾಟಿಲ್‌, ಪ್ರಣಬ್‌ ಮುಖರ್ಜಿ ಮತ್ತು ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದಲೂ ಪುರಸ್ಕೃತರಾಗಿದ್ದಾರೆ.

ಇದನ್ನೂ ಓದಿ: ದಲಿತನೆಂಬ ಕಾರಣಕ್ಕೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ; ರಾಜೀನಾಮೆ ಸಲ್ಲಿಸಿದ ಉತ್ತರ ಪ್ರದೇಶ ಸಚಿವ

Exit mobile version