ನವ ದೆಹಲಿ: ಆಮ್ ಆದ್ಮಿ ಪಕ್ಷ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶೇ.14ರಷ್ಟು ಮತಗಳಿಕೆ ಮೂಲಕ 5 ಸೀಟ್ ಗೆದ್ದಿದ್ದು ಸುಲಭದ ಮಾತಲ್ಲ ಎಂದು ಆಪ್ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಇದನ್ನವರು ವಿಚಿತ್ರವಾಗಿ ಪ್ರಸ್ತುತ ಪಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ‘ಕಳೆದ ಒಂದು ವರ್ಷದಲ್ಲಿ ನಾವು ಪಂಜಾಬ್ ಗೆದ್ದೆವು. ದೆಹಲಿ ಮಹಾನಗರ ಪಾಲಿಕೆಯಲ್ಲಿ ನಮ್ಮ ಆಡಳಿತ ಬಂತು. ಗೋವಾದಲ್ಲಿ ಇಬ್ಬರು ಶಾಸಕರು ನಮ್ಮವರಿದ್ದಾರೆ. ಗುಜರಾತ್ನಲ್ಲಿ ಶೇ.14ರಷ್ಟು ಮತ ಗಳಿಕೆ ಮಾಡಿ, ಐದು ಕ್ಷೇತ್ರ ಗೆದ್ದುಕೊಂಡೆವು. ಆದರೆ ಈ ಗುಜರಾತ್ನಲ್ಲಿ ಈ ಗೆಲುವು ಸುಲಭದ್ದಲ್ಲ. ನನ್ನ ಬಳಿ ಬಂದವರೊಬ್ಬರು, ಗುಜರಾತ್ನಲ್ಲಿ ನಾವು ಇಷ್ಟು ಸೀಟ್ ಪಡೆದಿದ್ದನ್ನು ಉಲ್ಲೇಖಿಸಿ, ‘ಹಸುವಿನಿಂದ ಹಾಲನ್ನು ಯಾರು ಬೇಕಾದರೂ ಹಿಂಡುತ್ತಾರೆ. ಆದರೆ ನೀವು ಎತ್ತಿನ ಹಾಲು ಕರೆದಿರಿ’ ಎಂದು ಹೇಳಿದರು. ಇಲ್ಲಿ ಅರವಿಂದ್ ಕೇಜ್ರಿವಾಲ್ ಅವರು, ಅಸಾಧ್ಯವಾಗಿದ್ದನ್ನು ನಾವು ಸಾಧ್ಯ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಹೀಗೆ ‘ಎತ್ತಿನ ಹಾಲು ಹಿಂಡಿದ’ ವಿಶೇಷಣ ಬಳಸಿದ್ದಾರೆ.
ಇನ್ನು ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗಡಿಯಲ್ಲಿ ಚೀನಾ ಸೈನಿಕರು ಭಾರತದ ಯೋಧರ ಮೇಲೆ ಇಷ್ಟು ದಾಳಿ ನಡೆಸುತ್ತಿದ್ದಾರೆ. ಆ ದೇಶ ಕುತಂತ್ರ ಮಾಡುತ್ತಿದ್ದರೂ ಚೀನಾದ ವಸ್ತುಗಳನ್ನು ಯಾಕೆ ನಮ್ಮ ದೇಶದಲ್ಲಿ ಬಳಸಲಾಗುತ್ತಿದೆ? ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇಕೆ ಇದಕ್ಕೆ ಕಡಿವಾಣ ಹಾಕುತ್ತಿಲ್ಲ? ಎಂದು ಪ್ರಶ್ನಿಸಿದರು. ಹಾಗೇ, ಇಡೀ ದೇಶದಲ್ಲಿ ಪ್ರಾಮಾಣಿಕವಾಗಿ ಇರುವುದು ಆಪ್ ಪಕ್ಷ ಮಾತ್ರ. ಅದು ಜನರಿಗೂ ಗೊತ್ತಿದೆ. ಉಳಿದಂತೆ ಒಂದು ರಾಷ್ಟ್ರೀಯ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಇನ್ನೊಂದು ಪಕ್ಷ ಗೂಂಡಾ ಸಂಸ್ಕೃತಿ ಉತ್ತೇಜಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Bhagwant Marriage: ಪಂಜಾಬ್ ಸಿಎಂ ಮಾನ್ ಮದುವೆ ಸಂಭ್ರಮ, ಅರವಿಂದ್ ಕೇಜ್ರಿವಾಲ್ ಸಹಿತ ಹಲವರು ಭಾಗಿ