ದೇಶದ ಅತಿದೊಡ್ಡ ಎಜುಟೆಕ್ ಸಂಸ್ಥೆ ಎನ್ನಿಸಿದ್ದ ಬೈಜೂಸ್ (Byju’s APP) ಕಳೆದ ಎರಡು-ಮೂರು ತಿಂಗಳಿಂದಲೂ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಬೆಂಗಳೂರು ಮೂಲದ ಈ ಆನ್ಲೈನ್ ಕಲಿಕಾ ಆ್ಯಪ್ನ ಸಂಸ್ಥಾಪಕ, ಸಿಇಒ ಬೈಜು ರವೀಂದ್ರನ್ (Byju Raveendran) ಅವರ ಮನೆ ಮೇಲೆ ಏಪ್ರಿಲ್ನಲ್ಲಿ ಇ.ಡಿ.ದಾಳಿಯಾಗಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಇನ್ನು ಬೈಜೂಸ್‌ನಲ್ಲಿ ಉದ್ಯೋಗ ಕಡಿತ (Byju’s Layoffs)ದ ಅಲೆಯೂ ಜೋರಾಗಿಯೇ ಇದೆ. ಇ.ಡಿ.ದಾಳಿಗೂ ಮುನ್ನ ಮತ್ತು ಅದರ ನಂತರ ಬೈಜೂಸ್ನ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಹೀಗೆ ಒಂದರ ಬೆನ್ನಿಗೆ ಒಂದರಂತೆ ಎದುರಾಗುತ್ತಿರುವ ಸಮಸ್ಯೆಗಳ ಮಧ್ಯೆ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರು ತಮ್ಮ ಉದ್ಯೋಗಿಗಳಿಗೆ ಒಂದು ಭಾವನಾತ್ಮಕ ಸಂದೇಶವನ್ನು ಮೇಲ್ ಮಾಡಿದ್ದಾರೆ.
ಬೈಜೂಸ್ ಕಂಪನಿ ಕೇವಲ ನನ್ನ ಉದ್ಯೋಗವಲ್ಲ. ಇದು ನನ್ನ ಜೀವನ. ಕಳೆದ 18 ದಿನಗಳಿಂದ, ಪ್ರತಿದಿನ 18 ತಾಸುಗಳ ಸಮಯವನ್ನು ನಾನು ಈ ಬೈಜೂಸ್ಗೆ ಕೊಡುತ್ತಿದ್ದೇನೆ. ಈ ಲರ್ನಿಂಗ್ ಸಂಸ್ಥೆಗಾಗಿ ನನ್ನ ಹೃದಯ ಮತ್ತು ಮನಸನ್ನು ಸಂಪೂರ್ಣವಾಗಿ ಮೀಸಲಿಟ್ಟಿದ್ದೇನೆ. ಇನ್ನೂ 30ವರ್ಷ ನಾನು ಹೀಗೇ ಕಳೆಯಬೇಕು ಎಂದುಕೊಂಡಿದ್ದೇನೆ’ ಎಂದು 43ವರ್ಷದ ರವೀಂದ್ರನ್ ಅವರು ತಮ್ಮ ಇ-ಮೇಲ್ನಲ್ಲಿ ಬರೆದಿದ್ದಾರೆ.
ಬೈಜೂಸ್ ರವೀಂದ್ರನ್ ಅವರು ತಮ್ಮ ಉದ್ಯೋಗಿಗಳನ್ನು ಉದ್ದೇಶಿಸಿ ಕೆಲವು ದಿನಗಳ ಹಿಂದೆ ಬೆಂಗಳೂರಿನ ಟೌನ್ಹಾಲ್ನಲ್ಲಿ ಮಾತನಾಡಿದ್ದರು. ಬೈಜೂಸ್‌ನಲ್ಲಿ ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಉದ್ಯೋಗಿಗಳಿಗೆ ಮುಕ್ತವಾಗಿ ಮಾಹಿತಿ ನೀಡಿದ್ದರು. ಇತ್ತೀಚೆಗೆ ರಾಜೀನಾಮೆ ಕೊಟ್ಟ ಕಂಪನಿಯ ಆಡಿಟರ್, ಮಂಡಳಿಯ ಕೆಲವು ಸದಸ್ಯರ ಬಗ್ಗೆಯೂ ಮಾತಾಡಿದ್ದರು. ಅದಾದ ಬೆನ್ನಲ್ಲೇ ಇ ಮೇಲ್ ಮಾಡಿದ್ದಾರೆ. ‘ನಿಮ್ಮೆಲ್ಲರ ಬಗ್ಗೆ ಮೆಚ್ಚುಗೆಯ ಭಾವವನ್ನು ಮನಸಲ್ಲಿ ತುಂಬಿಕೊಂಡು ನಾನು ಈ ಸಂದೇಶವನ್ನು ಬರೆಯುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರೀತಿಯ ಕಂಪನಿ ಬೈಜೂಸ್ ಸುತ್ತ ಹಲವು ಬೆಳವಣಿಗೆಗಳು ನಡೆದವು. ಇದರಿಂದಾಗಿ ನಮ್ಮ ಉದ್ಯೋಗಿಗಳಲ್ಲಿ ಅನಿಶ್ಚಿತತೆ ಮತ್ತು ಕಳವಳ ಹುಟ್ಟಿತು. ಇದೀಗ ಎದುರಾಗಿರುವ ಎಲ್ಲ ಸವಾಲುಗಳನ್ನೂ ನಾವೆಲ್ಲ ಒಟ್ಟಾಗಿ, ಸಮರ್ಥವಾಗಿ ಎದುರಿಸುತ್ತಿದ್ದೇವೆ. ಹಾಗೇ ನಮ್ಮ ಉದ್ಯಮವನ್ನು ವ್ಯವಸ್ಥಿತಗೊಳಿಸಿ, ಇನ್ನಷ್ಟು ಉತ್ತಮಗೊಳಿಸಲು ಮತ್ತೆ ಸುಸ್ಥಿರಗೊಳಿಸಿ, ಲಾಭದಾಯಕ ಮಾಡುವ ಸಲುವಾಗಿ ಅಗತ್ಯ ಕಾರ್ಯತಂತ್ರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ಸದೃಢ ತಂಡ ಮತ್ತು ಭದ್ರ ಬುನಾದಿಯೊಂದಿಗೆ ಸುಸ್ಥಿರ ಬೆಳವಣಿಗೆಗೆ ನಾವು ಸಿದ್ಧರಾಗಿದ್ದೇವೆ’ ಎಂದು ಬೈಜು ರವೀಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: BYJU’s Layoffs: ಬೈಜೂಸ್‌ನಲ್ಲಿ ‘ಸ್ಲಿಪ್’ ಆಗುತ್ತಿದೆ ಉದ್ಯೋಗ, ಮತ್ತೆ ಸಾವಿರ ಜನಕ್ಕೆ ಪಿಂಕ್ ಸ್ಲಿಪ್
ಉದ್ಯೋಗ ಕಡಿತದ ಬಗ್ಗೆ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ ಬೈಜು ರವೀಂದ್ರನ್ ‘ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ನಾನು ತೆಗೆದುಕೊಂಡ ನಿರ್ಧಾರದಿಂದ ಹಲವರಿಗೆ ತೊಂದರೆಯಾಯಿತು. ಅವರೆಲ್ಲರ ಬಗ್ಗೆ ನನ್ನ ಹೃದಯ ಮಿಡಿಯುತ್ತಿದೆ. ಕಷ್ಟದ ಸಮಯಗಳು ನಮ್ಮನ್ನು ಪರೀಕ್ಷೆ ಮಾಡುತ್ತವೆ. ಆದರೆ ನಮ್ಮ ನಿಜವಾದ ಸಾಮರ್ಥ್ಯವನ್ನೂ ತೆರೆದಿಡುತ್ತವೆ. ಈ ನಮ್ಮ ಎಜುಟೆಕ್ ಕಂಪನಿ ಖಂಡಿತ ಉಳಿಯುತ್ತದೆ. ನಾವು ಇಷ್ಟೇ ಗಮ್ಯ ತಲುಪಲು ಇಲ್ಲಿಯವರೆಗೆ ಬಂದಿಲ್ಲ. ನಮ್ಮ ಎಜುಟೆಕ್ ಪ್ರಯಾಣ ಮುಂದುವರಿಯುತ್ತದೆ ಎಂಬ ಭರವಸೆಯನ್ನು ನಾನು ನಿಮಗೆ ಕೊಡುತ್ತೇನೆ’ ಎಂದು ರವೀಂದ್ರನ್ ಹೇಳಿದ್ದಾರೆ. ಅಲ್ಲಿಗೆ ಬೈಜೂಸ್ ಲರ್ನಿಂಗ್ ಆ್ಯಪ್ಗೆ ಯಾವುದೇ ತೊಂದರೆಯೂ ಆಗಲು ಬಿಡುವುದಿಲ್ಲ ಎಂದು ರವೀಂದ್ರನ್ ತಿಳಿಸಿದ್ದಾರೆ.