Site icon Vistara News

Bypoll Results: ಅಖಿಲೇಶ್‌ ಯಾದವ್‌ ಪಕ್ಷದ ಕೈಯಲ್ಲಿದ್ದ ಎರಡೂ ಲೋಕಸಭಾ ಕ್ಷೇತ್ರಗಳು ಬಿಜೆಪಿ ಮಡಿಲಿಗೆ

UP Bypolls

ನವದೆಹಲಿ: ಉತ್ತರ ಪ್ರದೇಶದ ರಾಂಪುರ ಮತ್ತು ಅಜಂಗಢ್‌ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಬಿಜೆಪಿ ಆಘಾತ ಕೊಟ್ಟಿದೆ. ಅಖಿಲೇಶ್‌ ಯಾದವ್‌ರ ಸಮಾಜವಾದಿ ಪಕ್ಷದ ಕೈಯಲ್ಲಿದ್ದ ಎರಡೂ ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಂಡಿದೆ. ರಾಂಪುರದಲ್ಲಿ ಬಿಜೆಪಿ ಅಭ್ಯರ್ಥಿ ಘನಶ್ಯಾಮ್‌ ಲೋಧಿ, ಸಮಾಜವಾದಿ ಪಕ್ಷದ ಆಸಿಂ ರಾಜಾ ವಿರುದ್ಧ ಸುಮಾರು 42 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರೆ, ಅಜಂಗಢ್‌ ಬಿಜೆಪಿ ಅಭ್ಯರ್ಥಿ ದಿನೇಶ್‌ ಲಾಲ್‌ ಯಾದವ್‌ ಕೂಡ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್‌ಗಿಂತ ಸುಮಾರು ೫ ಸಾವಿರ ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಘನಶ್ಯಾಮ ಲೋಧಿಯವರಿಗೆ ಮುಖ್ಯ ಚುನಾವಣಾಧಿಕಾರಿ ರವೀಂದ್ರ ಕುಮಾರ್ ಮಂದಾರ ಈಗಾಗಲೇ ಗೆಲುವಿನ ಸರ್ಟಿಫಿಕೇಟ್‌ ಕೂಡ ಕೊಟ್ಟಿದ್ದಾರೆ.

ರಾಂಪುರ ಮತ್ತು ಅಜಂಗಢ್‌ ಲೋಕಸಭಾ ಕ್ಷೇತ್ರಗಳೆರಡಲ್ಲೂ ಸಮಾಜವಾದಿ ಪಕ್ಷದ ಸಂಸದರೇ ಇದ್ದರು. ೨೦೧೯ರ ಚುನಾವಣೆಯಲ್ಲಿ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್‌ಪಿ ನಾಯಕ ಆಜಂ ಖಾನ್‌ ೨೦೨೨ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಹಾಗಾಗಿ ಅವರು ಲೋಕಸಭೆ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇನ್ನೊಂದೆಡೆ ಅಜಂಗಢ್‌ದ ಸಂಸದರಾಗಿದ್ದವರು ಅಖಿಲೇಶ್‌ ಯಾದವ್.‌ ಇವರೂ ಸಹ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಖರ್ಹಾಲ್‌ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದಿದ್ದಾರೆ. ಲೋಕಸಭೆಯೋ-ವಿಧಾನಸಭೆಯೋ ಎಂಬ ಆಯ್ಕೆ ಬಂದಾಗ ಶಾಸಕನ ಸ್ಥಾನ ಉಳಿಸಿಕೊಂಡು, ಸಂಸದನ ಸ್ಥಾನ ಬಿಟ್ಟಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳು ಖಾಲಿಯಾಗಿದ್ದವು. ಜೂ. ೨೩ರಂದು ಚುನಾವಣೆ ನಡೆದಿತ್ತು.

ಟ್ವೀಟ್‌ ಮಾಡಿದ ಸಿಎಂ ಯೋಗಿ
ರಾಂಪುರದ ಗೆಲುವು ಮತ್ತು ಅಜಂಗಢ್‌ನಲ್ಲೂ ಗೆಲುವು ಪಕ್ಕಾ ಎಂಬ ಸನ್ನಿವೇಶ ಇರುವುದರಿಂದ ಬಿಜೆಪಿ ವಲಯದಲ್ಲಿ ಸಂಭ್ರಮ ಮನೆಮಾಡಿದೆ. ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಪ್ರಧಾನಿ ನರೇಂದ್ರ ಮೋದಿಯವರ ಯಶಸ್ವಿ ನಾಯಕತ್ವದಲ್ಲಿ ಜಾರಿಯಾಗುತ್ತಿರುವ ಸಾರ್ವಜನಿಕ ಕಲ್ಯಾಣ ಯೋಜನೆಗಳು ಮತ್ತು ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರದ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಸಾಕ್ಷಿ ಈ ಗೆಲುವು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಪ್‌ಗೆ ಮುಖಭಂಗ; ಭಗವಂತ್‌ ಮಾನ್‌ ಸಂಸದರಾಗಿದ್ದ ಕ್ಷೇತ್ರದಲ್ಲಿ ಎಸ್‌ಎಡಿ-ಎ ಅಭ್ಯರ್ಥಿಗೆ ಗೆಲುವು

Exit mobile version