ಪಶ್ಚಿಮ ಬಂಗಾಳದಲ್ಲಿ ಬರುವ ತಿಂಗಳು 8ರಂದು ಪಂಚಾಯಿತಿ ಚುನಾವಣೆ (West Bengal Panchayat polls) ನಡೆಯಲಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಹಿಂಸಾಚಾರ (West Bengal violence) ಶುರುವಾಗಿದೆ. ಒಬ್ಬ ಅಭ್ಯರ್ಥಿ ಸೇರಿ, ನಾಲ್ವರ ಪ್ರಾಣವೇ ಹೋಗಿದೆ. ಯಾವುದೇ ಚುನಾವಣೆ ಬರಲಿ ಪಶ್ಚಿಮ ಬಂಗಾಳದಲ್ಲಿ ರಕ್ತಪಾತ ಶತಃಸಿದ್ಧ ಎನ್ನುವಂತಾಗಿದೆ. ಇದೀಗ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಅಲ್ಲಲ್ಲಿ ಗುಂಡಿನ ಸದ್ದು, ಮಾರಕಾಸ್ತ್ರಗಳ ಪ್ರಯೋಗ ನಡೆಯುತ್ತಿರುವ ಕಾರಣ ಕೋಲ್ಕತ್ತ ಹೈಕೋರ್ಟ್ (Calcutta High Court) ಕೆಂಡಾಮಂಡಲವಾಗಿದೆ. ರಾಜ್ಯದ ಪಂಚಾಯಿತಿ ಚುನಾವಣೆ ವೇಳೆ ಕೇಂದ್ರ ಮೀಸಲು ಪಡೆಗಳನ್ನು ನಿಯೋಜಿಸುವಂತೆ ಈಗಾಗಲೇ ನಿರ್ದೇಶನ ನೀಡಿರುವ ಕೋಲ್ಕತ್ತ ಹೈಕೋರ್ಟ್ ಈಗ ರಾಜ್ಯ ಸರ್ಕಾರಕ್ಕೆ ಮತ್ತೊಂದು ಖಡಕ್ ಸೂಚನೆ ಕೊಟ್ಟಿದೆ.
ರಾಜ್ಯದ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಮೇಲೆ ದಾಳಿಯಾಗುತ್ತಿರುವ, ಈಗಾಗಲೇ ಸಲ್ಲಿಸಲ್ಪಟ್ಟ ನಾಮಪತ್ರಗಳೇ ಮಾಯ ಆಗುತ್ತಿರುವುದಕ್ಕೆ ಸಂಬಂಧಪಟ್ಟಂತೆ ಸಲ್ಲಿಕೆಯಾದ ದೂರು ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ‘ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರವನ್ನು ಕೂಡಲೇ ನಿಯಂತ್ರಿಸಬೇಕು. ಹಾಗೊಮ್ಮೆ ರಕ್ತಪಾತ ಮುಂದುವರಿದಿದ್ದೇ ಆದರೆ ಪಂಚಾಯಿತಿ ಚುನಾವಣೆಯನ್ನು ನಿಲ್ಲಿಸಿಬಿಡಿ’ ಎಂದು ತೀಕ್ಷ್ಣವಾಗಿಯೇ ಹೇಳಿದೆ. ಈ ಸೂಚನೆಯನ್ನು ಕೊಡುವಾಗ ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರು ತುಂಬ ಕ್ರೋಧಗೊಂಡಿದ್ದರು. ‘ಒಂದು ಪಂಚಾಯಿತಿ ಚುನಾವಣೆಯಿಂದಾಗಿ ವಿಪರೀತ ಹಿಂಸಾಚಾರ ಆಗುತ್ತಿದೆ. ಅವ್ಯವಸ್ಥೆ ಮಿತಿಮಿರೀದೆ. ಕಂಡಕಂಡಲ್ಲಿ ಘರ್ಷಣೆ ಏರ್ಪಡುತ್ತಿದೆ. ಇದು ರಾಜ್ಯಕ್ಕೇ ನಾಚಿಕೆಗೇಡು. ಯಾಕಿಷ್ಟು ಅವ್ಯವಸ್ಥೆ? ರಾಜ್ಯ ಚುನಾವಣಾ ಆಯೋಗ ಏನು ಮಾಡುತ್ತಿದೆ?’ ಎಂದು ಕೋಪದಿಂದಲೇ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಎಂದರೆ ಹಿಂಸಾಚಾರಕ್ಕೆ ಲೈಸೆನ್ಸ್ ಅಲ್ಲ; ಸುಪ್ರೀಂಕೋರ್ಟ್ ಖಡಕ್ ಸೂಚನೆ, ಮಮತಾ ಬ್ಯಾನರ್ಜಿಗೆ ಮುಖಭಂಗ
ಜುಲೈ 8ರಂದು ನಡೆಯಲಿರುವ ಚುನಾವಣೆಗೆ ಜೂ.15ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅಂದಿನಿಂದಲೇ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಹಿಂಸಾಚಾರವೂ ಪ್ರಾರಂಭವಾಗಿದೆ. ಅದರಲ್ಲೂ ಉತ್ತರ ದಿನಾಜ್ಪುರ, ಮುರ್ಷಿದಾಬಾದ್, ದಕ್ಷಿಣ 24 ಪರಗಣದ ಭಂಗಾರ್ನಲ್ಲಂತೂ ವಿಪರೀತ ಹೊಡೆದಾಟ, ಗುಂಡಿನ ದಾಳಿ ನಡೆದಿದೆ. ಇದುವರೆಗೆ ನಾಲ್ವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಜೂನ್ 16ರಂದು ಇಂಡಿಯನ್ ಸೆಕ್ಯೂಲರ್ ಫ್ರಂಟ್ (ISF) ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬಡಿದಾಟವಾಗಿತ್ತು. ಬಾಂಬ್, ಬುಲೆಟ್ಗಳು ಭರ್ಜರಿ ಸೌಂಡ್ ಮಾಡಿದ್ದವು. ಇನ್ನು ಈ ಗಲಭೆಯಲ್ಲಿ ವಾಹನಗಳು ಸುಟ್ಟು ಬೂದಿಯಾಗುತ್ತಿವೆ. ಸಾರ್ವಜನಿಕ ಆಸ್ತಿಪಾಸ್ತಿಗಳು ಧ್ವಂಸಗೊಳ್ಳುತ್ತಿವೆ. ಈ ಮಧ್ಯೆ ಕೋಲ್ಕತ್ತ ಹೈಕೋರ್ಟ್ ಇಂಥದ್ದೊಂದು ಸೂಚನೆ ಕೊಟ್ಟಿದೆ.