Site icon Vistara News

ಶ್ರೀರಾಮನವಮಿ ದಿನದ ಹಿಂಸಾಚಾರ ತನಿಖೆಯನ್ನು ಎನ್​ಐಎಗೆ ವಹಿಸಿದ ಕೋಲ್ಕತ್ತ ಹೈಕೋರ್ಟ್​; ದೀದಿ ಸರ್ಕಾರಕ್ಕೆ ಮುಖಭಂಗ

Calcutta High Court Transfers Ram Navami Clashes investigation to NIA

#image_title

ಕೋಲ್ಕತ್ತ: ಶ್ರೀರಾಮನವಮಿ ದಿನದಂದು ಪಶ್ಚಿಮ ಬಂಗಾಳದಲ್ಲಿ ನಡೆದ ಕೋಮು ಹಿಂಸಾಚಾರ (West Bengal Ram Navami Violence) ಪ್ರಕರಣದ ತನಿಖೆಯನ್ನು ​​ ರಾಷ್ಟ್ರೀಯ ತನಿಖಾ ದಳ (NIA Probe)ಕ್ಕೆ ವಹಿಸಿ, ಕೋಲ್ಕತ್ತ ಹೈಕೋರ್ಟ್​ ಇಂದು ತೀರ್ಪು ನೀಡಿದೆ. ಇದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತೀವ್ರ ಹಿನ್ನಡೆ. ಮಾರ್ಚ್​ 30ರಂದು ಶ್ರೀರಾಮನವಿ ದಿನ ಪಶ್ಚಿಮ ಬಂಗಾಳದ ಹೌರಾ ಮತ್ತು ಹೂಗ್ಲಿಯಲ್ಲಿ ದೊಡ್ಡಮಟ್ಟದ ಕೋಮುಗಲಭೆಯಾಗಿತ್ತು. ಹಿಂದುಗಳು ರಾಮನವಮಿ ನಿಮಿತ್ತ ಆಯೋಜಿಸಿದ್ದ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಿದ್ದರು. ಈ ಗಲಾಟೆ ಮಿತಿಮೀರಿ ಹಿಂಸಾಚಾರಕ್ಕೆ ತಿರುಗಿತ್ತು. ಅಂಗಡಿ-ಮುಂಗಟ್ಟುಗಳು, ವಾಹನಗಳಿಗೆಲ್ಲ ಬೆಂಕಿಯಿಡಲಾಗಿತ್ತು.

ಹೌರಾ ಮತ್ತು ಹೂಗ್ಲಿ ಹಿಂಸಾಚಾರದ ತನಿಖೆಯನ್ನು ಎನ್​ಐಗೆ ವಹಿಸುವಂತೆ ಮನವಿ ಮಾಡಿ, ಪಶ್ಚಿಮ ಬಂಗಾಳ ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್​ ಅವರು ಪ್ರಧಾನಿ ಮೋದಿಗೆ ಪತ್ರವನ್ನೂ ಬರೆದಿದ್ದರು. ಇನ್ನೊಂದೆಡೆ ಸಿಎಂ ಮಮತಾ ಬ್ಯಾನರ್ಜಿಯವರು ಘಟನೆಯನ್ನು ಹಗುರವಾಗಿ ತೆಗೆದುಕೊಂಡಿದ್ದರು. ಮುಸ್ಲಿಮರ ಪ್ರಾಬಲ್ಯ ಇರುವಲ್ಲಿ, ಹಿಂದುಗಳೇಕೆ ಮೆರವಣಿಗೆ ನಡೆಸಬೇಕು ಎಂದು ಪ್ರಶ್ನಿಸಿದ್ದರು. ಅವರ ಈ ಮಾತುಗಳು ಆಕ್ರೋಶಕ್ಕೆ ಕಾರಣವಾಗಿದ್ದವು.

ಹೀಗೆ ಶ್ರೀರಾಮನವಮಿ ದಿನದಂದು ಹೌರಾ ಮತ್ತು ಹೂಗ್ಲಿ ಹಿಂಸಾಚಾರವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲು ಆಗ್ರಹಿಸಿ ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಆಡಳಿತ ನೀತಿಯನ್ನೂ ಅವರು ಪ್ರಶ್ನಿಸಿದ್ದರು. ಆದರೆ ಕೇಂದ್ರ ತನಿಖಾ ದಳಗಳ ಹಸ್ತಕ್ಷೇಪವನ್ನು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಇತರ ನಾಯಕರು ವಿರೋಧಿಸಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋಲ್ಕತ್​ ಹೈಕೋರ್ಟ್​ ಇಂದು ಅಂತಿಮ ತೀರ್ಪು ನೀಡಿದೆ.

ಇದನ್ನೂ ಓದಿ: ಆಗ್ರಾದಲ್ಲಿ ರಾಮನವಮಿ ದಿನ ಗೋಹತ್ಯೆ ಮಾಡಿದ್ದು ಹಿಂದು ಮಹಾಸಭಾ ಕಾರ್ಯಕರ್ತರು, ಕೋಮು ಗಲಭೆ ಸೃಷ್ಟಿಸಲು ಕೃತ್ಯ: ಪೊಲೀಸರಿಂದ ಮಾಹಿತಿ

ಘಟನೆಗೆ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸಲು ಹೈಕೋರ್ಟ್​​ನಿಂದ ಒಂದು ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ಅದರ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ಎಲ್.ನರಸಿಂಹ ರೆಡ್ಡಿ ವಹಿಸಿದ್ದರು. ಈ ಸಮಿತಿ ಕೋರ್ಟ್​ಗೆ ಒಂದು ಮಧ್ಯಂತರ ವರದಿಯನ್ನು ಇತ್ತೀಚೆಗೆ ನೀಡಿತ್ತು. ಶ್ರೀರಾಮನವಮಿ ದಿನದಂದು ಹೌರಾ, ಹೂಗ್ಲಿ, ರಿಶ್ರಾ ಮತ್ತು ಇತರ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಜಿತ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿತ್ತು.

Exit mobile version