ನವ ದೆಹಲಿ: ವೈವಾಹಿಕ ಬಂಧವನ್ನು ಇನ್ನು ಮುಂದುವರಿಸಲು ಸಾಧ್ಯವೇ ಇಲ್ಲ, ಮುರಿದು ಹೋದ ಮನಸು ಒಂದು ಗೂಡಿ, ಜತೆಯಾಗಿ ಬಾಳ್ವೆ ಮಾಡಲು ಇನ್ನಾಗುವುದೇ ಇಲ್ಲ ಎಂಬ ಸ್ಥಿತಿಗೆ ಪತಿ-ಪತ್ನಿ ಇಬ್ಬರೂ ತಲುಪಿದ್ದರೆ. ಅಂಥ ಸನ್ನಿವೇಶಗಳಲ್ಲಿ, ಆ ದಂಪತಿಗೆ ತತ್ಕ್ಷಣವೇ ಡಿವೋರ್ಸ್ ನೀಡಬಹುದು. ಆರು ತಿಂಗಳು ಕಾಯುವ ಅಗತ್ಯ ಇರುವುದಿಲ್ಲ. ಅಂಥ ಮದುವೆಯನ್ನು ಸುಪ್ರೀಂಕೋರ್ಟ್ (Supreme Court) ತನಗೆ ಸಂವಿಧಾನ ಕೊಟ್ಟಿರುವ ವಿವೇಚನಾ ಅಧಿಕಾರ (ಸೆಕ್ಷನ್ 142)ವನ್ನು ಬಳಸಿ ತಕ್ಷಣವೇ ರದ್ದು ಮಾಡಬಹುದು ಎಂದು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಇಂದು ತೀರ್ಪು ನೀಡಿದೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ದಂಪತಿಗೆ ಮೊದಲು ಕೌನ್ಸಿಲಿಂಗ್ ನೀಡಿ, ಮತ್ತೆ ಆರು ತಿಂಗಳು ಕಾಯುವಂತೆ ಹೇಳಲಾಗುತ್ತದೆ. ಮನಸು ಬದಲಿಸಿ, ಜತೆಗೆ ಬಾಳುವ ನಿರ್ಧಾರಕ್ಕೆ ಬರಲು ಹಿಂದು ವಿವಾಹ ಕಾಯ್ದೆಯಡಿ ಇಂಥದ್ದೊಂದು ಅವಕಾಶ ನೀಡಲಾಗುತ್ತದೆ. ಇದೀಗ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ‘ಎಲ್ಲ ಸಂದರ್ಭಗಳಲ್ಲೂ 6ತಿಂಗಳ ಅವಧಿ ನೀಡುವ ಅಗತ್ಯ ಕಾಣುವುದಿಲ್ಲ. ವಿಚ್ಛೇದನ ಪ್ರಕರಣದ ಸ್ವರೂಪ ನೋಡಬೇಕು. ಪತಿ-ಪತ್ನಿ ಮಧ್ಯೆ ಇನ್ನು ಸಹಬಾಳ್ವೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿದ್ದಾಗ ಕಾಲಾವಕಾಶ ನೀಡದೆ ಡಿವೋರ್ಸ್ ಕೊಡಬಹುದು ಎಂದು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ತಿಳಿಸಿದೆ.
ಇದನ್ನೂ ಓದಿ: Same-sex marriage : ಸಲಿಂಗಿ ವಿವಾಹ ಪ್ರಕರಣದ ವಿಚಾರಣೆ ನಡೆಸದಿರುವಂತೆ ಸುಪ್ರೀಂಕೋರ್ಟ್‌ಗೆ ಬಾರ್ ಕೌನ್ಸಿಲ್ ಒತ್ತಾಯ
ಪರಸ್ಪರ ವಿಚ್ಛೇದನಕ್ಕಾಗಿ ನೇರವಾಗಿಯೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಹಲವು ದಂಪತಿ, ‘ನಮಗೆ ವಿಚ್ಛೇದನಕ್ಕೆ ಕಾಲಾವಕಾಶ ಬೇಡ. ನಮ್ಮ ಮದುವೆಯನ್ನು ತಕ್ಷಣವೇ ರದ್ದುಗೊಳಿಸಲು ಸುಪ್ರೀಂಕೋರ್ಟ್ ತನಗಿರುವ ಸೆಕ್ಷನ್ 142 ಅಧಿಕಾರ ಬಳಸಬೇಕು. ನಮ್ಮ ಡಿವೋರ್ಸ್ ವಿಚಾರಣೆಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವಹಿಸಬೇಡಿ’ ಎಂದು ಮನವಿ ಮಾಡಿದರು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅಗತ್ಯ ಸಂದರ್ಭಗಳಲ್ಲಿ ತತ್ಕ್ಷಣವೇ ಡಿವೋರ್ಸ್ ನೀಡಬಹುದು ಎಂದು ತೀರ್ಪು ನೀಡಿದೆ.
ಸಂವಿಧಾನದ ಸೆಕ್ಷನ್ 142 ಸುಪ್ರೀಂಕೋರ್ಟ್‌ಗೆ ವಿವೇಚನಾ ಅಧಿಕಾರವನ್ನು ಒದಗಿಸುತ್ತದೆ. ಇದರ ಅನ್ವಯ ಸುಪ್ರೀಂಕೋರ್ಟ್ ತನ್ನ ಪೀಠಗಳಲ್ಲಿ ಪೆಂಡಿಂಗ್ ಇರುವ ಪ್ರಕರಣಗಳಿಗೆ ಸಂಪೂರ್ಣ ನ್ಯಾಯ ಒದಗಿಸಲು, ಆ ಕೇಸ್ನ ವಿಷಯಕ್ಕೆ ತಕ್ಕಂತೆ ತನ್ನ ವಿವೇಚನೆಯನ್ನು ಬಳಸಿ ತೀರ್ಪು ನೀಡಬಹುದಾಗಿದೆ.