Site icon Vistara News

Promising Freebies | ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಘೋಷಣೆ ತಡೆಯಲು ಆಗಲ್ಲ ಎಂದ ಸುಪ್ರೀಂ ಕೋರ್ಟ್

Court

ನವದೆಹಲಿ: ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳು ಜನರಿಗೆ ನೀಡುವ ಉಚಿತ ಕೊಡುಗೆಗಳ (Promising Freebies) ಭರವಸೆಗಳನ್ನು ತಡೆಯಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿದೆ. ಇತ್ತೀಚೆಗಷ್ಟೇ ಉಚಿತ ಯೋಜನೆಗಳ ಭರವಸೆಯು ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಕೋರ್ಟ್‌ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದ ನ್ಯಾಯಪೀಠವೀಗ, ಉಚಿತ ಕೊಡುಗೆ ಘೋಷಣೆಗಳಿಗೆ ತಡೆಯಾಜ್ಞೆ ನೀಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಉಚಿತ ಕೊಡುಗೆಗಳ ಘೋಷಣೆ ಕುರಿತು ಡಿಎಂಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎನ್‌.ವಿ.ರಮಣ ಅವರು, “ನಮಗೆ ಸಾರ್ವಜನಿಕರ ಹಣದ ಬಗ್ಗೆ ಕಾಳಜಿ ಇದೆ. ಜನರು ಗೌರವಯುತವಾಗಿ ಜೀವನ ಸಾಗಿಸಲು ಬಯಸುತ್ತಾರೆ. ಅವರ ಬಯಕೆಗೆ ಸರಕಾರದ ಯೋಜನೆಗಳು ಪುಷ್ಟಿ ನೀಡುವಂತಿರಬೇಕು. ನರೇಗಾದಂತಹ ಯೋಜನೆಗಳಿಂದ ಜನರಿಗೆ ಅನುಕೂಲವಾಗಿವೆ. ಆದರೆ, ಉಚಿತ ಕೊಡುಗೆಯ ವಿಷಯವು ಸಂಕೀರ್ಣವಾಗಿದೆ. ನ್ಯಾಯಾಲಯವು ಈ ಕುರಿತು ಆದೇಶ ಹೊರಡಿಸಲು ಆಗುವುದಿಲ್ಲ” ಎಂದು ಹೇಳಿದರು.

ಉಚಿತ ಕೊಡುಗೆಗಳನ್ನು ಪ್ರಶ್ನಿಸಿ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದು, ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಇಂತಹ ವಿಚಾರದಲ್ಲಿ ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದು ತಿಳಿಸಿತ್ತು. ಕೇಂದ್ರ ಸರಕಾರದಿಂದ ಪ್ರತಿಕ್ರಿಯೆಯನ್ನೂ ಕೇಳಿತ್ತು.

ಇದನ್ನೂ ಓದಿ | ಮತದಾರರಿಗೆ ಆಮಿಷಗಳನ್ನು ನಿಲ್ಲಿಸದಿದ್ದರೆ ಚುನಾವಣಾ ಆಯೋಗಕ್ಕೆ ದೇವರೇ ಗತಿ : ಸುಪ್ರೀಂ

Exit mobile version