ರಾಜಸ್ಥಾನ ರಾಜ್ಯ ಸರ್ಕಾರದ (Rajasthan Government) ಯೋಜನಾ ಭವನದಲ್ಲಿ ಅಪಾರ ಪ್ರಮಾಣದ ನಗದು-ಬಂಗಾರ ಸಿಕ್ಕಿದ್ದು ಈಗ ಕುತೂಹಲ ಹುಟ್ಟಿಸಿದೆ. ಜೈಪುರದಲ್ಲಿರುವ ಯೋಜನಾ ಭವನದ ನೆಲಮಾಳಿಗೆಯಲ್ಲಿರುವ ಒಂದು ಲಾಕ್ ಆದ ಕಪಾಟಿನಲ್ಲಿ 2.31 ಕೋಟಿ ರೂಪಾಯಿ ನಗದು ಮತ್ತು ಒಂದು ಕೆಜಿ ಚಿನ್ನದ ಬಿಸ್ಕಿಟ್ಗಳು ಪತ್ತೆಯಾಗಿವೆ. ರಾಜಸ್ಥಾನ ಯೋಜನಾ ಆಯೋಗಕ್ಕೆ ಸೇರಿದ ಈ ಭವನ ಅಲ್ಲಿನ ಸರ್ಕಾರಿ ಸಚಿವಾಲಯದ ಸಮೀಪವೇ ಇದೆ. ಇದೀಗ ಸಿಕ್ಕಿರುವ ನಗದಿನಲ್ಲಿ ಬಹುತೇಕ 2000 ರೂ. ಮತ್ತು 500 ರೂಪಾಯಿ ನೋಟುಗಳೇ ಇವೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ರಾಜಸ್ಥಾನ ಅಧಿಕಾರಶಾಹಿ ವರ್ಗದಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದೆ.
ರಾಜಸ್ಥಾನ ಯೋಜನಾ ಭವನದಲ್ಲಿ ಅಪಾರ ಮೊತ್ತದ ನಗದು, ಬಂಗಾರ ಪತ್ತೆಯಾದ ಬೆನ್ನಲ್ಲೇ ಅಲ್ಲಿನ ಸಿಎಸ್ (ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ) ಉಶಾ ಶರ್ಮಾ, ಡಿಜಿಪಿ ಉಮೇಶ್ ಮಿಶ್ರಾ ಮತ್ತು ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾತ್ಸವ್ ಅವರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಈ ಮಧ್ಯೆ ರಾಜಸ್ಥಾನದ ಪ್ರತಿಪಕ್ಷವಾದ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ. 2000 ರೂಪಾಯಿ ನೋಟುಗಳನ್ನು ಆರ್ಬಿಐ ಹಿಂಪಡೆದ ಬೆನ್ನಲ್ಲೇ, ರಾಜಸ್ಥಾನ ಯೋಜನಾ ಭವನದಲ್ಲಿ ಈ ನಗದು, ಚಿನ್ನ ಸಿಕ್ಕಿದೆ.
ಶೋಧ ಮಾಡಿದ್ದೇಕೆ?
ಯೋಜನಾ ಭವನವನ್ನು ಶೋಧ ಮಾಡಬೇಕು ಎಂದು ಪೊಲೀಸರು ಅಲ್ಲೇನೂ ಹೋಗಿರಲಿಲ್ಲ. ಅಲ್ಲಿನ ಹಳೇಹಳೇ ಫೈಲ್ಗಳನ್ನು ಗಣಕೀಕೃತಗೊಳಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಯೋಜನಾ ಭವನದ ನೆಲಮಾಳಿಗೆಯಲ್ಲಿರುವ ಎರಡು ಬೀರುಗಳ ಲಾಕ್ ಓಪನ್ ಮಾಡಲು ಕೀ ಕಾಣಿಸಿರಲಿಲ್ಲ. ಎಷ್ಟು ಹುಡುಕಿದರೂ ಕೀ ಕಾಣದೆ ಇದ್ದಾಗ ಆ ಬೀರುಗಳನ್ನು ಒಡೆಯಲಾಗಿದೆ. ಒಂದು ಕಪಾಟಿನಲ್ಲಿ ಫೈಲ್ಗಳು ಸಿಕ್ಕಿವೆ. ಆದರೆ ಮತ್ತೊಂದು ಕಪಾಟಿನಲ್ಲಿ ಒಂದು ಬ್ಯಾಗ್ ಮತ್ತು ಲ್ಯಾಪ್ಟಾಪ್ ಪತ್ತೆಯಾಗಿದೆ. ಬ್ಯಾಗ್ನಲ್ಲಿ ಫೈಲ್ಗಳು ಇರಬಹುದು ಎಂದು ತೆರೆದಾಗ ಈ ನಗದು ಮತ್ತು ಚಿನ್ನದ ಬಿಸ್ಕಿಟ್ಗಳು ಸಿಕ್ಕಿವೆ. ಅದನ್ನು ನೋಡುತ್ತಿದ್ದಂತೆ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಅಧಿಕಾರಿ ಮಹೇಶ್ ಗುಪ್ತಾ ಎಂಬುವವರು ತಮ್ಮ ಮೇಲಧಿಕಾರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಅಲ್ಲಿಗೆ ಹೋಗಿ ನಗದು, ಚಿನ್ನದ ಬಿಸ್ಕಿಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Rajasthan Budget: ವಿಧಾನಸಭೆಯಲ್ಲಿ ಹಳೇ ಬಜೆಟ್ ಓದಿ ಎಡವಟ್ಟು ಮಾಡಿಕೊಂಡ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್!
ಈ ಚಿನ್ನ-ಹಣದ ಹೊಣೆಯನ್ನು ಯಾರೊಬ್ಬರೂ ಹೊರಲು ಸಿದ್ಧರಿರಲಿಲ್ಲ. ಹೀಗಾಗಿ ಅಧಿಕೃತ ತನಿಖೆ ಶುರುವಾಗಿದ್ದು ಪೊಲೀಸ್ ವಿಶೇಷ ತಂಡ ರಚನೆಗೊಂಡಿದೆ. 7-8 ಶಂಕಿತರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲಿನ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.