ನವ ದೆಹಲಿ: ಅಗ್ನಿಪಥ್ ಯೋಜನೆ ಜಾರಿಯಾದಾಗಿನಿಂದಲೂ ವಿವಾದದ ಕೇಂದ್ರವಾಗಿದೆ. ಉದ್ಯೋಗ ಭರವಸೆಯೇ ಇಲ್ಲದ ಯೋಜನೆ ಇದು ಎಂದು ಬಿಹಾರ, ಉತ್ತರ ಪ್ರದೇಶ ಸೇರಿ 8ಕ್ಕೂ ಹೆಚ್ಚು ರಾಜ್ಯಗಳಲ್ಲಿ ದೊಡ್ಡಮಟ್ಟದ ಪ್ರತಿಭಟನೆ-ಹಿಂಸಾಚಾರ ಸೃಷ್ಟಿಯಾಗಿತ್ತು. ಅಗ್ನಿಪಥ್ ಯೋಜನೆ ವಿರೋಧಿ ಅರ್ಜಿಗಳು ಕೂಡ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿವೆ. ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಇಂದು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ಇದೆಲ್ಲದರ ಮಧ್ಯೆ ಈ ಅಗ್ನಿಪಥ್ ಯೋಜನೆ ಸಂಬಂಧಪಟ್ಟು ಇನ್ನೊಂದು ವಿವಾದ ಭುಗಿಲೆದ್ದಿದೆ.
ʼಅಗ್ನಿಪಥ್ ಯೋಜನೆಯಡಿ ನೇಮಕಾತಿ ಪ್ರಕ್ರಿಯೆಯಲ್ಲಿ ಧರ್ಮ ಮತ್ತು ಜಾತಿಯ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಆಕಾಂಕ್ಷಿಗಳು ತಾವು ತುಂಬುವ ಫಾರ್ಮ್‌ನಲ್ಲಿ ಕೂಡ ಈ ಕಾಲಮ್‌ನ್ನು ಭರ್ತಿ ಮಾಡಬೇಕು ಜತೆಗೆ ಸರ್ಟಿಫಿಕೇಟ್ ಕೊಡಬೇಕು. ಈ ಮೂಲಕ ಬಿಜೆಪಿ ಅಗ್ನಿವೀರರನ್ನು ಬಳಸಿಕೊಂಡು ಜಾತಿವೀರರ ಸೇನೆ ಕಟ್ಟುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಹಾಗೇ, ʼಆರ್‌ಎಸ್‌ಎಸ್ ಪ್ರಭಾವಿತ ಜಾತಿ ಆಧಾರಿತ ಪಕ್ಷಪಾತಿ ಅಜೆಂಡಾ ಅಗ್ನಿವೀರರ ನೇಮಕಾತಿಯಲ್ಲೂ ಬೇರೂರಿದೆʼ ಎಂದು ಆರ್‌ಜೆಡಿ ಆರೋಪಿಸಿದೆ.
ಟ್ವೀಟ್ ಮಾಡಿರುವ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ʼ ನೀವು ಸನ್ಯಾಸಿಗಳ ಬಳಿ ಜಾತಿ ಪ್ರಮಾಣ ಪತ್ರ ಕೇಳಬೇಡಿ, ಸೈನಿಕರ ಬಳಿ ಕೇಳಿ. ಜಾತಿ ಆಧಾರಿತ ಜನಗಣತಿ ನಡೆಸಿ ಎಂದರೆ ಕೇಂದ್ರ ಸರ್ಕಾರಕ್ಕೆ ಅದು ಆಗೋದಿಲ್ಲ. ಆದರೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇನೆಯಲ್ಲಿ ಸೇವೆ ಸಲ್ಲಿಸುವ ಅಗ್ನಿವೀರರು ತಮ್ಮ ಜಾತಿ ಯಾವುದೆಂದು ಹೇಳುವುದು ಕಡ್ಡಾಯ. ಇದೆಲ್ಲದಕ್ಕೂ ಕಾರಣ ಆರ್‌ಎಸ್‌ಎಸ್. ಸೈನಿಕರನ್ನು ಜಾತಿ ಆಧಾರದ ಮೇಲೆ ವಿಂಗಡಿಸುವ ಉದ್ದೇಶಕ್ಕೇ ಹೀಗೆ ಮಾಡಲಾಗುತ್ತದೆʼ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಅಗ್ನಿಪಥ್ ವಿರುದ್ಧದ ಅರ್ಜಿಗಳ ವಿಚಾರಣೆ: ಜುಲೈ 20ಕ್ಕೆ ದಿನ ನಿಗದಿ ಮಾಡಿದ ದಿಲ್ಲಿ ಹೈಕೋರ್ಟ್
ರಾಜನಾಥ್ ಸಿಂಗ್ ಪ್ರತ್ಯುತ್ತರ
ಪ್ರತಿಪಕ್ಷಗಳ ಈ ಆರೋಪಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿಯ ಇತರ ನಾಯಕರು ಪ್ರತ್ಯುತ್ತರ ನೀಡಿದ್ದಾರೆ. ಜಾತಿ-ಧರ್ಮದ ಪ್ರಮಾಣ ಪತ್ರ ಕೇಳುತ್ತಿರುವುದು ಆರ್‌ಎಸ್‌ಎಸ್ ಅಜೆಂಡಾ ಎಂಬುದು ಒಂದು ವದಂತಿಯಷ್ಟೇ. ಹಾಗೇನೂ ಇಲ್ಲ. ಸೇನಾ ನೇಮಕಾತಿ ಪ್ರಕ್ರಿಯೆ, ಅರ್ಜಿ ಭರ್ತಿ ಕ್ರಿಯೆ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಈ ವಿಧಾನ ಇತ್ತು ಎಂದು ಹೇಳಿದ್ದಾರೆ
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಪ್ರತಿಕ್ರಿಯೆ ನೀಡಿ, ʼಸೇನಾ ನೇಮಕಾತಿ ಮಾಡಿಕೊಳ್ಳುವಾಗ ಅದರ ಅರ್ಜಿಯಲ್ಲಿ ಜಾತಿ-ಧರ್ಮದ ಕಾಲಮ್ ಇದೆ. ಅದನ್ನು ತುಂಬುವುದು ಕಡ್ಡಾಯ. ಹಾಗಂತ ಅದನ್ನು ಯಾವುದಕ್ಕೂ ಪರಿಗಣಿಸಲಾಗುವುದಿಲ್ಲ. ಸೈನಿಕನ ಜಾತಿ-ಧರ್ಮವನ್ನು ಎಲ್ಲಿಯೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು 2013ರಲ್ಲಿ ಭಾರತೀಯ ಸೇನೆ ಸುಪ್ರೀಂಕೋರ್ಟ್‌ಗೆ ಅಫಿಡಿವಿಟ್ ಸಲ್ಲಿಸಿದೆʼ ಎಂಬುದನ್ನು ನೆನಪಿಸಿದರು.
ಭಾರತೀಯ ಸೇನೆ ಹೇಳೋದೇನು?
ಪ್ರತಿಪಕ್ಷಗಳ ಆರೋಪಕ್ಕೆ ಭಾರತೀಯ ಸೇನೆ ಕೂಡ ಸ್ಪಷ್ಟನೆ ನೀಡಿದೆ. ಸೇನಾ ನೇಮಕಾತಿ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದ್ದರೂ, ಅದರ ಪ್ರಕ್ರಿಯೆ, ನೀತಿಯಲ್ಲಿ ಬದಲಾಗಿಲ್ಲ. ಈ ಹಿಂದೆಯೂ ಕೂಡ ಅರ್ಜಿಯಲ್ಲಿ ಜಾತಿ-ಧರ್ಮದ ಕಾಲಮ್ ಇತ್ತು. ಜಾತಿ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿತ್ತು. ಎಂದು ಹೇಳಿದೆ.
ಇದನ್ನೂ ಓದಿ: ಅಗ್ನಿಪಥ್ ವಿರೋಧಿ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದ ಸುಪ್ರೀಂಕೋರ್ಟ್