Site icon Vistara News

Caste census: ಜಾತಿ ಜನಗಣತಿ ಕೂಡಲೇ ನಿಲ್ಲಿಸಿ; ಬಿಹಾರ ಸರ್ಕಾರಕ್ಕೆ ಹೈಕೋರ್ಟ್​​ನಿಂದ ಆದೇಶ

Caste Survey Paused By Patna High Court in Bihar

#image_title

ಬಿಹಾರದಲ್ಲಿ ಅಲ್ಲಿನ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿ ಸಮೀಕ್ಷೆ (Caste-Based Survey)ಗೆ ಇಂದು (ಮೇ 4) ಪಾಟ್ನಾ ಹೈಕೋರ್ಟ್​ ತಡೆ ನೀಡಿದೆ. ಜಾತಿ ಜನಗಣತಿ ನಡೆಸಬೇಕು ಎಂಬುದು ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಾಸೆ. ಅದರ ಪ್ರಕಾರವಾಗಿ ಬಿಹಾರ ರಾಜ್ಯ ಸರ್ಕಾರ ಈಗಾಗಲೇ ಅಲ್ಲಿ ಜಾತಿ ಜನಗಣತಿ (Caste census) ನಡೆಸುತ್ತಿದೆ. ಆದರೆ ಅದಕ್ಕೆ ಈಗ ಪಾಟ್ನಾ ಹೈಕೋರ್ಟ್​ ಕಡಿವಾಣ ಹಾಕಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಲು ರಾಜ್ಯ ಸರ್ಕಾರ ಸಿದ್ಧವಾಗುತ್ತಿದೆ ಎಂದು ಹೇಳಲಾಗಿದೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯವನ್ನು ತಲುಪಿಸುವ ಸಲುವಾಗಿ, ಹಿಂದುಳಿದ ವರ್ಗದವರಿಗೂ ಅನುಕೂಲ ಮಾಡಿಕೊಡಬೇಕು ಎಂಬ ಕಾರಣಕ್ಕೆ ಮುಖ್ಯಮಂತ್ರಿ ನಿತೀಶ್​ ಕುಮಾರ್ ಅವರು ರಾಜ್ಯದಲ್ಲಿ ಜಾತಿ ಜನಗಣತಿ ಪ್ರಾರಂಭಿಸಿದ್ದರು. ಹಾಗೇ ಈ ಜಾತಿ ಜನಗಣತಿಯನ್ನು 2ಹಂತದಲ್ಲಿ ನಡೆಸುವುದಾಗಿಯೂ ಅವರು ತಿಳಿಸಿದ್ದರು. ಆದರೆ ಬಿಹಾರದಲ್ಲಿ ನಡೆಸಲಾಗುತ್ತಿರುವ ಜಾತಿ ಜನಗಣತಿ ಸಮೀಕ್ಷೆ ವಿರುದ್ಧ ಹಲವರು ಪಾಟ್ನಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಜಾತಿ ಜನಗಣತಿ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಪಾಟ್ನಾ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್​ ಮತ್ತು ನ್ಯಾ..ಮಧುರೇಶ್​ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠ ‘ಕೂಡಲೇ ಜಾತಿ ಜನಗಣತಿ ಸಮೀಕ್ಷೆಯನ್ನು ನಿಲ್ಲಿಸಿ’ ಎಂದು ಆದೇಶಿಸಿದೆ. ಅಷ್ಟೇ ಅಲ್ಲ, ‘ ಜಾತಿ ಆಧಾರಿತ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇರುವುದಿಲ್ಲ. ಇದುವರೆಗಿನ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಡೇಟಾ (ದತ್ತಾಂಶ)ಗಳನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಮತ್ತು ಅದನ್ನು ಸುರಕ್ಷಿತವಾಗಿ ಇಡಬೇಕು. ಈ ಕೇಸ್​ನ ಅಂತಿಮ ತೀರ್ಪು ಬರುವವರೆಗೂ ಡೇಟಾ ಸೋರಿಕೆಯಾಗಬಾರದು’ ಎಂದು ಹೇಳಿದೆ. ಹಾಗೇ, ಮುಂದಿನ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿದೆ.

ಇದನ್ನೂ ಓದಿ: Supreme Court | ಬಿಹಾರ ಜಾತಿ ಗಣತಿ ಪ್ರಶ್ನಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಬಿಹಾರದಲ್ಲಿ ಜಾತಿ ಜನಗಣತಿ ನಡೆಸುವುದನ್ನು ವಿರೋಧಿಸಿ ಈ ಹಿಂದೆ ಜನವರಿಯಲ್ಲಿ ಒಂದಿಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂಕೋರ್ಟ್ ಅರ್ಜಿಗಳನ್ನು ವಜಾಗೊಳಿಸಿತ್ತು. ಸುಪ್ರೀಂಕೋರ್ಟ್​ ಅರ್ಜಿ ವಜಾ ಮಾಡುತ್ತಿದ್ದಂತೆ ಜನವರಿ 7ರಿಂದ 21ರವರೆಗೆ ಮೊದಲ ಹಂತದ ಜಾತಿ ಜನಗಣತಿಯನ್ನು ಬಿಹಾರ ಸರ್ಕಾರ ನಡೆಸಿತ್ತು. ಸಮೀಕ್ಷೆಯ ಎರಡನೇ ಹಂತ ಏಪ್ರಿಲ್ 15ರಿಂದ ಪ್ರಾರಂಭವಾಗಿದ್ದು, ಮೇ 15ರವರೆಗೆ ನಡೆಯುವುದಿತ್ತು. ಅಷ್ಟರಲ್ಲಿ ಪಾಟ್ನಾ ಹೈಕೋರ್ಟ್​ ತಡೆ ನೀಡಿದೆ. ಜಾತಿ ಜನಗಣತಿಯಿಂದ ಒಳ್ಳೆಯದಾಗುವುದಿಲ್ಲ ಎಂದು ಅರ್ಜಿದಾರರು ವಾದಿಸುತ್ತಿದ್ದಾರೆ.

Exit mobile version