ವಿಶಾಖಪಟ್ಟಣಂ: ಆಂಧ್ರಪ್ರದೇಶದ ಸಂಸದರಾಗಿದ್ದ ವಿವೇಕಾನಂದ ರೆಡ್ಡಿ (Vivekananda Reddy Murder Case) ಅವರ ಹತ್ಯೆ ಪ್ರಕರಣದಡಿ, ಅಲ್ಲಿನ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಚಿಕ್ಕಪ್ಪ ವೈ.ಎಸ್.ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಬಂಧಿಸಿದೆ. ಈ ಭಾಸ್ಕರ್ ರೆಡ್ಡಿಯವರು ವೈಎಸ್ಆರ್ಸಿಪಿ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಅವರ ಅಪ್ಪ. ಭಾಸ್ಕರ್ ರೆಡ್ಡಿಯವರನ್ನು ಕಡಪಾದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ (ಪಿತೂರಿ), 302 (ಹತ್ಯೆ), 201 (ಸಾಕ್ಷ್ಯವನ್ನು ತಿರುಚುವುದು)ನಡಿ ಪ್ರಕರಣ ದಾಖಲು ಮಾಡಲಾಗಿದೆ.
ವಿವೇಕಾನಂದ ರೆಡ್ಡಿಯವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ (ಸಿಎಂ ಜಗನ್ಮೋಹನ್ ರೆಡ್ಡಿ ಅಪ್ಪ)ಯವರ ಸಹೋದರ. ಆಂಧ್ರ ಸಿಎಂ ಜಗನ್ ಮೋಹನ್ ಅವರಿಗೆ ವರಸೆಯಲ್ಲಿ ಚಿಕ್ಕಪ್ಪನೇ ಆಗಬೇಕು. 2019ರಲ್ಲಿ ಆಂಧ್ರ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಪೂರ್ವ ಅಂದರೆ 2019ರ ಮಾರ್ಚ್ 15ರಂದು ಪುಲಿವೆಂದುಲದಲ್ಲಿರುವ ತಮ್ಮ ನಿವಾಸದಲ್ಲಿಯೇ ಹತ್ಯೆಗೀಡಾಗಿದ್ದರು. ಈ ಸಾವಿನ ತನಿಖೆಯನ್ನು ಮಾಡಲು ಮೊದಲು ಎಸ್ಐಟಿ (ವಿಶೇಷ ತನಿಖಾ ತಂಡ)ವನ್ನು ರಚಿಸಲಾಗಿತ್ತು. 2020ರ ಜುಲೈನಲ್ಲಿ ಕೇಸ್ನ್ನು ಸಿಬಿಐಗೆ ಹಸ್ತಾಂತರ ಮಾಡಲಾಗಿತ್ತು.
ಇದನ್ನೂ ಓದಿ: ಆಂಧ್ರಪ್ರದೇಶದ ಹೊಸ ರಾಜಧಾನಿ ವಿಶಾಖಪಟ್ಟಣಂ; ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಣೆ
2019ರ ಲೋಕಸಭೆ ಚುನಾವಣೆಯಲ್ಲಿ ಕಡಪ ಲೋಕಸಭಾ ಕ್ಷೇತ್ರದಿಂದ ವೈ.ಎಸ್. ಅವಿನಾಶ್ ರೆಡ್ಡಿಗೆ ಟಿಕೆಟ್ ಕೊಡುವುದನ್ನು ವಿವೇಕಾನಂದ ರೆಡ್ಡಿ ಬಲವಾಗಿ ವಿರೋಧಿಸಿದ್ದರು. ಅಲ್ಲಿನ ಸಂಸದರಾಗಿದ್ದ ವಿವೇಕಾನಂದ ರೆಡ್ಡಿ, ತನಗಾಗಲೀ, ಜಗನ್ ಮೋಹನ್ ರೆಡ್ಡಿ ಅಮ್ಮ ವೈ.ಎಸ್.ವಿಜಯಮ್ಮಂಗೆ ಆಗಲೀ ಅಥವಾ ಸಹೋದರಿ ವೈ.ಎಸ್.ಶರ್ಮಿಳಾ ಅವರಿಗಾಗಲೀ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದ್ದರು. ಇದು ಭಾಸ್ಕರ್ ರೆಡ್ಡಿಯವರನ್ನು ಕೆರಳಿಸಿತ್ತು ಎಂದು ಸಿಬಿಐ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಈ ಹಿಂದೆಯೂ ವೈ.ಎಸ್.ಭಾಸ್ಕರ್ ರಡ್ಡಿ ಮತ್ತು ಅವರ ಪುತ್ರ, ಕಡಪಾದ ಈಗಿನ ಸಂಸದ ಅವಿನಾಶ್ ರೆಡ್ಡಿಯನ್ನು ಸಿಬಿಐ ಅಧಿಕಾರಿಗಳು ಹಲವು ಬಾರಿ ವಿಚಾರಣೆಗೆ ಒಳಪಡಿಸಿದ್ದರು.
ಈ ಕೇಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಕಳೆದ ತಿಂಗಳು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ‘ಸಿಬಿಐನಲ್ಲಿಯೇ ಒಂದು ಎಸ್ಐಟಿ ರಚಿಸಿಕೊಂಡು, ಏಪ್ರಿಲ್ 30ರೊಳಗೆ ತನಿಖೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿತ್ತು. ಅದರಂತೆ ಸಿಬಿಐ ಅಧಿಕಾರಿಗಳು ಈಗ ತೆಲಂಗಾಣ ಹೈಕೋರ್ಟ್ನಲ್ಲಿ ಅಫಿಡಿವಿಟ್ ಸಲ್ಲಿಸಿದ್ದಾರೆ. ‘ಲೋಕಸಭಾ ಟಿಕೆಟ್ಗೆ ಅಡ್ಡಿಪಡಿಸುತ್ತಿದ್ದ ವಿವೇಕಾನಂದ ರೆಡ್ಡಿಯವರನ್ನು ಹತ್ಯೆ ಮಾಡಲು ಸಂಸದ ಅವಿನಾಶ್ ರೆಡ್ಡಿ, ಅವರ ಅಪ್ಪ ಭಾಸ್ಕರ್ ರೆಡ್ಡಿ ಮತ್ತು ಇವರಿಬ್ಬರ ಅನುಯಾಯಿಯಾಗಿರುವ ಡಿ.ಶಿವಶಂಕರ್ ರೆಡ್ಡಿ ಸಂಚು ರೂಪಿಸಿದ್ದರು. ಹಾಗೇ, ಇದರಲ್ಲಿ ಸಹಾಯ ಮಾಡಿದವರಿಗೆಲ್ಲ 40 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದರು’ ಎಂದೂ ಸಿಬಿಐ ಹೇಳಿದೆ.