Site icon Vistara News

CBI Cases: ಮೂರು ವರ್ಷಗಳಲ್ಲಿ 2000 ಅಧಿಕಾರಿಗಳ ಮೇಲೆ ಸಿಬಿಐ ಕೇಸ್‌

CBI

ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ 2000ಕ್ಕೂ ಅಧಿಕ ಅಧಿಕಾರಿಗಳ ಮೇಲೆ ಸಿಬಿಐ ವಿವಿಧ ಪ್ರಕರಣಗಳಲ್ಲಿ ಎಫ್‌ಐಆರ್‌ (CBI Cases) ದಾಖಲಿಸಿದೆ. ಇವರಲ್ಲಿ ಸಾರ್ವಜನಿಕ ಸೇವಾ ಹಾಗೂ ಪೊಲೀಸ್‌ ಅಧಿಕಾರಿಗಳಿದ್ದಾರೆ.

ಅತ್ಯುನ್ನತ ತನಿಖಾ ಸಂಸ್ಥೆಯ ಅಧಿಕಾರಿಗಳ ಮೇಲೆ ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ ಶೇ.44ರಷ್ಟು ಹೆಚ್ಚಳವಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಡೇಟಾ ತೋರಿಸಿದೆ. ಭ್ರಷ್ಟಾಚಾರ ಮತ್ತು ಲಂಚ ಪ್ರಕರಣದಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ಸಿಬಿಐ ಶನಿವಾರ ಬಂಧಿಸಿದ ಹಿನ್ನೆಲೆಯಲ್ಲಿ ಈ ಮಾಹಿತಿ ಬಂದಿದೆ. ಆರೋಪಿಗಳಿಂದ 60 ಲಕ್ಷ ರೂ. ನಗದನ್ನು ಸಿಬಿಐ ವಶಪಡಿಸಿಕೊಂಡಿದೆ.

ಅಂಕಿಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಸಿಬಿಐ 2,000ಕ್ಕೂ ಹೆಚ್ಚು ಸಾರ್ವಜನಿಕ ಸೇವಕರ ಮೇಲೆ ಕೇಸ್‌ ಬುಕ್ ಮಾಡಿದೆ. 2020ರಲ್ಲಿ ಒಟ್ಟು 608 ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ವಿವಿಧ ಪ್ರಕರಣ ದಾಖಲಿಸಲಾಯಿತು. 2021ರಲ್ಲಿ ಈ ಸಂಖ್ಯೆ 582ಕ್ಕೆ ಕುಸಿಯಿತು. ಆದರೆ 2022ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೇರಿದ ಒಟ್ಟು 844 ಅಧಿಕಾರಿಗಳನ್ನು ಆರೋಪಿಗಳಾಗಿ ದಾಖಲಿಸಲಾಗಿದೆ. ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವವರಲ್ಲಿ ಕೆಲವರು ಅತ್ಯಂತ ಹಿರಿಯ ಅಧಿಕಾರಿಗಳು.

ಸಿಬಿಐಗೆ ಒಂಬತ್ತು ರಾಜ್ಯಗಳಲ್ಲಿ ಪ್ರಾಸಿಕ್ಯೂಷನ್ ನಿರ್ಬಂಧ ಇದೆ. ಹಾಗಿದ್ದರೂ ಸಿಬಿಐ ಕೇಸ್‌ ಎದುರಿಸುತ್ತಿರುವ ಅಧಿಕಾರಿಗಳ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ. ಛತ್ತೀಸ್‌ಗಢ, ಜಾರ್ಖಂಡ್, ಕೇರಳ, ಮಿಜೋರಾಂ, ಪಂಜಾಬ್, ರಾಜಸ್ಥಾನ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ಪ್ರಕರಣಗಳ ತನಿಖೆಗೆ ಸಿಬಿಐಗೆ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿವೆ.

ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಮಾಣವೂ ಹೆಚ್ಚಳ ಹೊಂದಿದೆ. 2022ರಲ್ಲಿ ಶಿಕ್ಷೆಯ ಪ್ರಮಾಣ 75 ಪ್ರತಿಶತಕ್ಕೆ ತಲುಪಿದೆ. 2018ರಿಂದ 2021ರವರೆಗೆ ಇದು 70 ಪ್ರತಿಶತವನ್ನು ಮುಟ್ಟಿರಲಿಲ್ಲ.

ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿಯೂ ಸಿಬಿಐ ಇತ್ತೀಚೆಗೆ ಎಫ್‌ಐಆರ್ ದಾಖಲಿಸಿದೆ. ಗೃಹ ಸಚಿವಾಲಯವು ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಆಕ್ರಮಣಗಳ ಪ್ರಕರಣವನ್ನು ಸಿಬಿಐ ದಾಖಲಿಸಿದೆ.

ಇದನ್ನೂ ಓದಿ: CBI : ಐಪಿಎಸ್ ಅಧಿಕಾರಿ ಅಜಯ್ ಭಟ್ನಾಗರ್ ಸಿಬಿಐನ ಸ್ಪೆಷಲ್ ಡೈರೆಕ್ಟರ್!

Exit mobile version