ನವ ದೆಹಲಿ: ಅಬಕಾರಿ ನೀತಿ ಅಕ್ರಮದಡಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಿರುದ್ಧ ಎಫ್ಐಆರ್ ದಾಖಲು ಮಾಡುವುದಕ್ಕೂ ಮುನ್ನ ಸಿಬಿಐ (ಕೇಂದ್ರೀಯ ತನಿಖಾ ದಳ) ರಾಷ್ಟ್ರಪತಿಯವರಿಂದ ಪೂರ್ವಾನುಮತಿ ಪಡೆದಿದೆ ಎಂದು ಮೂಲಗಳು ಹೇಳಿವೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17 ಎ ಅನ್ವಯ, ಕೇಂದ್ರಾಡಳಿತ ಪ್ರದೇಶಗಳಲ್ಲಿನ ಯಾವುದೇ ಶಾಸಕ/ಸಂಸದರನ್ನು ತನಿಖೆಗೆ ಒಳಪಡಿಸಬೇಕು ಎಂದರೆ ರಾಷ್ಟ್ರಪತಿ ಅನುಮತಿ ಕಡ್ಡಾಯ. ಅದನ್ನು ಸಿಬಿಐ ಪಾಲಿಸಿದೆ ಎಂದು ಹೇಳಲಾಗಿದೆ. ಹಾಗೇ, ಸಿಸೋಡಿಯಾ ಮತ್ತು ಇತರ 13 ಮಂದಿಯ ವಿರುದ್ಧ ಲುಕೌಟ್ ನೋಟಿಸ್ ಕೂಡ ಹೊರಡಿಸಲಾಗಿದೆ. (ಯಾರ ವಿರುದ್ಧ ಲುಕೌಟ್ ನೋಟಿಸ್ ಜಾರಿಯಾಗಿರುತ್ತದೆಯೋ ಅವರು ಪೊಲೀಸರಿಗೆ ಬೇಕಾದವರು ಎಂದರ್ಥ. ಯಾವುದೇ ಕೇಸ್ನಡಿ ವಿಚಾರಣೆಗೆ ಒಳಪಟ್ಟವರು ಹೇಳದೆ-ಕೇಳದೆ ವಿದೇಶಗಳಿಗೆ ಪ್ರಯಣಿಸಲು ಪ್ರಯತ್ನಿಸಿದರೆ, ಈ ಲುಕೌಟ್ ಮೂಲಕ ಪತ್ತೆಹಚ್ಚಬಹುದು).
ದೆಹಲಿಯಲ್ಲಿ 2021ರಲ್ಲಿ ಜಾರಿಗೊಳಿದ್ದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಧ್ವನಿ ಎತ್ತಿದ್ದರು. ಅದನ್ನೀಗ ಸಿಬಿಐ ತನಿಖೆಗೆ ವಹಿಸಲಾಗಿದೆ. ನೂತನ ಅಬಕಾರಿ ನೀತಿಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಪರವಾನಗಿ ನೀಡುವಾಗ ಅವರಿಗೆ ಹಲವು ಅನುಕೂಲಗಳನ್ನು ಕಾನೂನು ಬಾಹಿರವಾಗಿ ಮಾಡಿಕೊಡಲಾಗಿದೆ. ಮದ್ಯದ ವ್ಯಾಪಾರಿ, ಇಂಡೋಸ್ಪಿರಿಟ್ ಮಾಲೀ ಸಮೀರ್ ಮಹೇಂದ್ರು ಎಂಬುವರು ಈ ನೂತನ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದಲ್ಲಿ ಆಳವಾದ ಹಸ್ತಕ್ಷೇಪ ಮಾಡಿದ್ದಾರೆ. ತಮಗೆ ಬೇಕಾದಂತೆ ಮದ್ಯದ ನೀತಿ ರೂಪಿಸಿಕೊಳ್ಳಲು ಮನೀಷ್ ಸಿಸೋಡಿಯಾಗೆ ಹಣ ಸಂದಾಯ ಮಾಡಿದ್ದಾರೆ. ಸಿಸೋಡಿಯಾ ಆಪ್ತರಿಗೆ ಕೋಟಿ ಲೆಕ್ಕಾಚಾರದಲ್ಲಿ ಎರಡು ಬಾರಿ ಹಣ ಪಾವತಿಯಾಗಿದೆ ಎಂದು ಸಿಬಿಐ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: Excise Policy Case | 2024ರ ಚುನಾವಣೆಯಲ್ಲಿ ಆಪ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಎಂದ ಮನೀಷ್ ಸಿಸೋಡಿಯಾ