ಕೋಲ್ಕತ್ತ: ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶಕ್ಕೆ ಹಸುಗಳ ಕಳ್ಳ ಸಾಗಣೆ ಪ್ರಕರಣದಡಿ ಸಿಬಿಐನಿಂದ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮಂಡಲ್ ಕೇಸ್ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರುತ್ತಿವೆಯಂತೆ !
ಅನುಬ್ರತಾ ಮಂಡಲ್ ಕೇಸ್ನ್ನು ಅಸಾನ್ಸೋಲ್ನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್ ಚಕ್ರವರ್ತಿ ಎಂಬುವರು ವಿಚಾರಣೆ ನಡೆಸುತ್ತಿದ್ದು, ತಮಗೆ ಬೆದರಿಕೆ ಪತ್ರ ಬರುತ್ತಿರುವುದುದಾಗಿ ಅವರೇ ಹೇಳಿಕೊಂಡಿದ್ದಾರೆ. ‘ಬಪ್ಪಾ ಚಟರ್ಜಿ ಎಂಬುವರ ಹೆಸರಿನಿಂದ ಬೆದರಿಕೆ ಪತ್ರ ಬಂದಿದೆ. ಆತನೂ ತಾನೊಬ್ಬ ಟಿಎಂಸಿ ನಾಯಕ ಎಂದೇ ಹೇಳಿಕೊಂಡಿದ್ದಾನೆ. ಅನುಬ್ರತಾ ಮಂಡಲ್ರನ್ನು ಬಿಡುಗಡೆ ಮಾಡದೆ ಇದ್ದರೆ, ನಿಮ್ಮಿಡೀ ಕುಟುಂಬದ ವಿರುದ್ಧ ಎನ್ಡಿಪಿಎಸ್ (Narcotic Drugs and Psychotropic Substances Act-ಮಾದಕ ದ್ರವ್ಯಗಳು ಮತ್ತು ಅಮಲು ವಸ್ತುಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಸುಳ್ಳು ಕೇಸ್ ದಾಖಲಿಸಿ, ಜೈಲಿಗೆ ಕಳಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಹಾಗೇ, ದೂರು ಕೂಡ ಕೊಟ್ಟಿದ್ದಾರೆ. ತಮಗೆ ಬಂದ ಬೆದರಿಕೆ ಪತ್ರವನ್ನೂ ದೂರಿನೊಂದಿಗೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಈ ಕೇಸ್ನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಕೋಲ್ಕತ್ತ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಬಿಜೆಪಿ ಖಂಡನೆ
ಅನುಬ್ರತಾ ಮಂಡಲ್ರನ್ನು ಬಿಡುಗಡೆ ಮಾಡುವಂತೆ ತಮಗೆ ಬೆದರಿಕೆ ಬರುತ್ತಿರುವುದಾಗಿ ಅಸಾನ್ಸೋಲ್ ಸಿಬಿಐ ಕೋರ್ಟ್ ನ್ಯಾಯಾಧೀಶ ರಾಕೇಶ್ ಚರ್ಕವರ್ತಿ ದೂರು ನೀಡಿದ ಬೆನ್ನಲ್ಲೇ, ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳ್ವಿಯಾ ಟ್ವೀಟ್ ಮಾಡಿ ‘ಕ್ರಿಮಿನಲ್ ಅನುಬ್ರತಾ ಮಂಡಲ್ ಬಿಡುಗಡೆ ಮಾಡುವಂತೆ ನ್ಯಾಯಾಧೀಶರಿಗೇ ಬೆದರಿಕೆ ಹಾಕಲಾಗಿದೆ. ಸಿಬಿಐ ಕೋರ್ಟ್ ನ್ಯಾಯಾಧೀಶರು ಈ ಬಗ್ಗೆ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಎರಡಕ್ಕೂ ಪತ್ರ ಬರೆದಿದ್ದಾರೆ. ಇಷ್ಟೆಲ್ಲ ಆದರೂ ಸಿಎಂ ಮಮತಾ ಬ್ಯಾನರ್ಜಿ ತನ್ನ ಆಪ್ತನನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ’ ಎಂದು ಆರೋಪ ಮಾಡಿದ್ದಾರೆ.
ಅನುಬ್ರತಾ ಮಂಡಲ್ ಮಮತಾ ಬ್ಯಾನರ್ಜಿಯ ಅತ್ಯಾಪ್ತರಾಗಿದ್ದರು. ಬೀರ್ಭೂಮ್ ಜಿಲ್ಲೆಯ ಅತ್ಯಂತ ಪ್ರಭಾವಿ ನಾಯಕ. ವಿವಾದಕ್ಕೆ ಪರ್ಯಾಯ ಎಂಬಂತೆ ಬದುಕಿದವರು. 2013ರ ಪಂಚಾಯತ್ ಚುನಾವಣೆಯ ವೇಳೆ ಮಂಡಲ್ ತಮ್ಮ ಕಾರ್ಯಕರ್ತರಿಗೆ ವಿಚಿತ್ರ ಆದೇಶ ಕೊಟ್ಟು ಸುದ್ದಿಯಾಗಿದ್ದರು. ಚುನಾವಣೆಯ ಸ್ವತಂತ್ರ ಅಭ್ಯರ್ಥಿಗಳ ಮನೆ ಮೇಲೆ ಮುಲಾಜಿಲ್ಲದೆ ಬಾಂಬ್ ಹಾಕಿ ಎಂದು ಸೂಚಿಸಿದ್ದರು. ಅದೇ ಕೆಲಸವನ್ನೇ ಟಿಎಂಸಿ ಕಾರ್ಯಕರ್ತರು ಮಾಡಿ, ವ್ಯಕ್ತಿಯೊಬ್ಬರ ಜೀವ ಹೋಗಿತ್ತು. ಚುನಾವಣೆ ಸಂದರ್ಭ ಬಂತು ಎಂದರೆ ಸಾಕು ಈ ವ್ಯಕ್ತಿಯ ಮೇಲೆ ಕಣ್ಣಿಡುವುದೇ ಒಂದು ಕೆಲಸವಾಯಿತು. ಟಿಎಂಸಿ ವಿರೋಧಿಸುವವರ ಮನೆ ಮೇಲೆ ರಾತ್ರಿ ದಾಳಿ ಮಾಡಿಸುವುದು, ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಹಠದಿಂದ ಗಲಭೆ ಎಬ್ಬಿಸುವುದೇ ಇವರ ಕಾಯಕವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮಂಡಲ್ ದಾಂಧಲೆ ಎಬ್ಬಿಸದಂತೆ ಕಣ್ಣಿಡುವ ಸಲುವಾಗಿಯೇ ನ್ಯಾಯಾಲಯ, ವಿಶೇಷ ಅಧಿಕಾರಿಗಳನ್ನು ನೇಮಕ ಕೂಡ ಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, 2021ರ ವಿಧಾನಸಭೆ ಚುನಾವಣೆ ವೇಳೆ, ಮಮತಾ ಬ್ಯಾನರ್ಜಿಯವರ khela hobe (ಆಟ ಶುರುವಾಗಿದೆ-The game is On) ಎಂಬ ಘೋಷಣೆಯನ್ನು ಅತ್ಯಂತ ಜನಪ್ರಿಯಗೊಳಿಸಿದವರು ಇವರು.
ಇದನ್ನೂ ಓದಿ: Bengal Coal Scam Case | ಮಮತಾ ನಾಡಿಗೆ ತನಿಖಾ ದಳಗಳ ಲಗ್ಗೆ; 8 ಐಪಿಎಸ್ ಅಧಿಕಾರಿಗಳಿಗೆ ಇಡಿ ಸಮನ್ಸ್