ನವ ದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದಡಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ, ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಕಲ್ವಕುಂಟ್ಲ ಅವರನ್ನು ಇಂದು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ತೆಲಂಗಾಣದ ಬಂಜಾರಾ ಹಿಲ್ಸ್ನಲ್ಲಿರುವ ಕವಿತಾ ಮನೆಯಲ್ಲೇ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.
ದೆಹಲಿಯಲ್ಲಿ ನೂತನ ಅಬಕಾರಿ ನೀತಿ ಜಾರಿ ಮಾಡುವ ವೇಳೆ ಲೈಸೆನ್ಸ್ ಕೊಡುವ ವಿಚಾರದಲ್ಲಿ ದೊಡ್ಡಮಟ್ಟದ ಹಗರಣ ಆಗಿದೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಿಬಿಐ ತನಿಖೆ ನಡೆಸುತ್ತಿದೆ. ಇ.ಡಿ.ಕೂಡ ದಾಳಿ ನಡೆಸಿ, ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಪ್ರಮುಖ ಆರೋಪಿ ಅಲ್ಲಿನ ಉಪಮುಖ್ಯಮಂತ್ರಿ, ಅಬಕಾರಿ ಇಲಾಖೆ ಉಸ್ತುವಾರಿ ಹೊತ್ತಿದ್ದ ಮನೀಶ್ ಸಿಸೋಡಿಯಾ ಎಂದು ಸಿಬಿಐ ಎಫ್ಐಆರ್ನಲ್ಲಿ ದಾಖಲಿಸಿದೆ. ಸಿಸೋಡಿಯಾ ಆಪ್ತರು, ಕೆಲವು ಲಿಕ್ಕರ್ ಉದ್ಯಮಿಗಳು ಸೇರಿ ಇದುವರೆಗೆ ಆರು ಜನರನ್ನು ತನಿಖಾದಳಗಳು ಬಂಧಿಸಿವೆ. ಹೀಗೆ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಪಟ್ಟು ಹಲವರನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಸ್ತುತ ಹಗರಣದಲ್ಲಿ ಕೆ.ಕವಿತಾ ಪಾತ್ರವೂ ಇದೆ ಎಂಬುದಕ್ಕೆ ಪೂರಕವಾದ ಅಂಶಗಳು ಬೆಳಕಿಗೆ ಬಂದಿದ್ದರಿಂದ ಅವರನ್ನೂ ವಿಚಾರಣೆ ನಡೆಸಲಾಗಿದೆ.
ಡಿಸೆಂಬರ್ 3ರಂದು ಕವಿತಾ ಅವರಿಗೆ ಸಿಬಿಐ ಸಮನ್ಸ್ ನೀಡಿ, ಡಿ.6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಕವಿತಾ ತಾವು ಹೈದರಾಬಾದ್ನಲ್ಲಿರುವ ತಮ್ಮ ಮನೆಯಲ್ಲೇ ವಿಚಾರಣೆಗೆ ಒಳಪಡುವುದಾಗಿ ಹೇಳಿದ್ದರು. ಹಾಗೇ, 6ನೇ ತಾರೀಖಿನಂದೇ ಹಾಜರಾಗುತ್ತೇನೆ ಎಂದೂ ಒಪ್ಪಿಕೊಂಡಿದ್ದರು. ಆದರೆ ನಂತರ ಸಿಬಿಐಗೆ ಇ-ಮೇಲ್ ಮಾಡಿದ್ದ ಕವಿತಾ, ‘ಡಿ.6ರಂದು ವಿಚಾರಣೆಗೆ ಲಭ್ಯವಿರಲು ಸಾಧ್ಯವಾಗುತ್ತಿಲ್ಲ. ನಾನು ಡಿ. 11, 12, 14 ಮತ್ತು 15ರಂದು ಹೈದರಾಬಾದ್ನ ನನ್ನ ನಿವಾಸದಲ್ಲಿಯೇ ಇರುತ್ತೇನೆ. ಆಗ ವಿಚಾರಣೆ ನಡೆಸಿ’ ಎಂದು ಮನವಿ ಮಾಡಿದ್ದರು. ಹೀಗಾಗಿ ಸಿಬಿಐ ಇಂದು ವಿಚಾರಣೆ ಕೈಗೆತ್ತಿಕೊಂಡಿದೆ.
ಕವಿತಾ ಮನೆ ಎದುರು ಬಿಗಿ ಭದ್ರತೆ
ದೆಹಲಿ ಅಬಕಾರಿ ಅಕ್ರಮ ಪ್ರಕರಣದಡಿ ಕೆ. ಕವಿತಾರನ್ನು ಸಿಬಿಐ ಅಧಿಕಾರಿಗಳು ಇಂದು ವಿಚಾರಣೆ ನಡೆಸುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ, ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರೆಲ್ಲ ಸೇರಿ ದೊಡ್ಡದೊಡ್ಡ ಪೋಸ್ಟರ್ಗಳನ್ನು ಹಾಕಿದ್ದರು. ‘ಹೋರಾಟಗಾರನ ಪುತ್ರಿ ಇದಕ್ಕೆಲ್ಲ ಹೆದರುವುದಿಲ್ಲ’, ‘ನಾವೆಲ್ಲರೂ ಕವಿತಕ್ಕಾರೊಂದಿಗೆ ಇದ್ದೇವೆ’ ಎಂಬ ಸಾಲುಗಳನ್ನು ಪೋಸ್ಟರ್ಗಳ ಮೇಲೆ ಬರೆಯಲಾಗಿದೆ. ಹಾಗೇ, ಕೆ. ಕವಿತಾ ಮನೆಯ ಬಳಿ ಬಿಗಿ ಭದ್ರತೆಯನ್ನೂ ಕಲ್ಪಿಸಲಾಗಿದೆ. ಈ ಮಧ್ಯೆ ಕವಿತಾ ಅವರೂ ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿ ‘ನಾನು ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಈ ವೇಳೆ ನನ್ನ ಮನೆ ಬಳಿ ಯಾರೂ ಬಂದು ಗುಂಪುಗೂಡಬೇಡಿ’ ಎಂದು ಹೇಳಿದ್ದರು.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಕೆ.ಕವಿತಾ ಇಡಿ ಕಣ್ಗಾವಲಿನಲ್ಲಿಯೂ ಇದ್ದಾರೆ. ಮುಖ್ಯ ಆರೋಪಿ ಎನ್ನಿಸಿರುವ ಮನೀಶ್ ಸಿಸೋಡಿಯಾ ಮತ್ತು ಕವಿತಾ ಮಧ್ಯೆ ಹಲವು ಬಾರಿ ದೂರವಾಣಿ ಮಾತುಕತೆ ನಡೆದಿರುವ ವಿಷಯ ಇಡಿ ತನಿಖೆ ವೇಳೆ ಗೊತ್ತಾಗಿದೆ. ಹೀಗಾಗಿ ತನಿಖಾ ದಳಗಳು ಕೆಸಿಆರ್ ಪುತ್ರಿಯನ್ನೂ ತನಿಖೆಗೆ ಗುರಿಮಾಡುತ್ತಿವೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣ; ತೆಲಂಗಾಣ ಮುಖ್ಯಮಂತ್ರಿ ಪುತ್ರಿ ಕೆ.ಕವಿತಾರಿಗೆ ಸಿಬಿಐ ಸಮನ್ಸ್