ನವ ದೆಹಲಿ: ದೆಹಲಿಯಲ್ಲಿ ಆಪ್ ಸರ್ಕಾರ ರೂಪಿಸಿರುವ ಶಿಕ್ಷಣ ವ್ಯವಸ್ಥೆ ಈಗಾಗಲೇ ವಿಶ್ವ ಮಟ್ಟದಲ್ಲಿ ಗಮನಸೆಳೆದಿದೆ. ಭಾರತದ ವಿವಿಧ ರಾಜ್ಯಗಳು ದೆಹಲಿ ಮಾದರಿ ಶಿಕ್ಷಣ ವ್ಯವಸ್ಥೆಯ ಅಧ್ಯಯನಕ್ಕಾಗಿ ಅಲ್ಲಿಗೆ ತಮ್ಮಲ್ಲಿಂದ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳನ್ನೂ ಕಳಿಸುತ್ತಿದ್ದಾರೆ. ಹೀಗಿರುವಾಗ ದೆಹಲಿಯಲ್ಲಿರುವ ಶಿಕ್ಷಣ ವ್ಯವಸ್ಥೆ, ಅಲ್ಲಿನ ಶಾಲೆಗಳಲ್ಲಿರುವ ಸೌಲಭ್ಯ, ಶಿಕ್ಷಕರಿಗಾಗಿ ರೂಪಿಸಲಾದ ವಿಶೇಷ ತರಬೇತಿ ವ್ಯವಸ್ಥೆ, ಮಕ್ಕಳಿಗೆ ಒದಗಿಸಿಕೊಡಲಾದ ಶೈಕ್ಷಣಿಕ ವಾತಾವರಣದ ಬಗ್ಗೆ ಇಂದು ಬೆಳಗ್ಗೆ ನ್ಯೂಯಾರ್ಕ್ ಟೈಮ್ಸ್ನ ಮೊದಲ ಪುಟದಲ್ಲಿ ಸುಮಾರು ಅರ್ಧಪುಟಗಳ ವರದಿ ಪ್ರಕಟಿಸಿದ್ದು Our Children Are Worth It ಎಂಬ ತಲೆ ಬರಹ ಕೊಟ್ಟಿದೆ. ಅದರಲ್ಲಿ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಅವರು ಮಕ್ಕಳೊಂದಿಗೆ ಇರುವ ಫೋಟೋ ಕೂಡ ಪ್ರಕಟವಾಗಿದೆ. ಹಾಗೇ ಕಾಕತಾಳೀಯವೆಂಬಂತೆ ಇಂದೇ, ಮನೀಷ್ ಸಿಸೋಡಿಯಾಗೆ ಸೇರಿದ 20 ಸ್ಥಳಗಳ ಮೇಲೆ ಸಿಬಿಐ ದಾಳಿಯಾಗಿದೆ. ಅದೂ ಕೂಡ ನೂತನ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾರಣಕ್ಕೆ..!
ನ್ಯೂಯಾರ್ಕ್ ಟೈಮ್ಸ್ನ ಇದೇ ವರದಿಯನ್ನು ಹಿಡಿದು, ಆಪ್ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಬಿಐ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ನ ವರದಿಯ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡ ಅರವಿಂದ್ ಕೇಜ್ರಿವಾಲ್ ‘ಅಮೆರಿಕದ ಅತಿದೊಡ್ಡ ಸುದ್ದಿಪತ್ರಿಕೆ ನ್ಯೂಯಾರ್ಕ್ ಟೈಮ್ಸ್ನಲ್ಲಿ ದೆಹಲಿ ಶಿಕ್ಷಣ ಮಾದರಿಯನ್ನು ಹೊಗಳಿ ಲೇಖನ ಪ್ರಕಟಿಸಿ, ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಫೋಟೋ ಪ್ರಕಟಗೊಂಡ ದಿನವೇ, ಕೇಂದ್ರ ಸರ್ಕಾರ ಸಿಸೋಡಿಯಾ ಮನೆಗೆ ಸಿಬಿಐನ್ನು ಕಳಿಸಿದೆ. ಕೇಂದ್ರ ಸರ್ಕಾರಕ್ಕೆ ದೆಹಲಿಯ ಅಭ್ಯುದಯ ಸಹಿಸಲು ಸಾಧ್ಯವಾಗುತ್ತಿಲ್ಲ. ದೆಹಲಿ ಇಡೀ ಭಾರತಕ್ಕೆ ಹೆಮ್ಮೆ ತಂದಿದೆ. ಮನೀಷ್ ಸಿಸೋಡಿಯಾ ಅವರು ಸ್ವತಂತ್ರ ಭಾರತದ ಅತ್ಯುತ್ತಮ ಶಿಕ್ಷಣ ಸಚಿವ’ ಎಂದು ಬರೆದುಕೊಂಡಿದ್ದಾರೆ.
ಬರೀ ನ್ಯೂಯಾರ್ಕ್ ಟೈಮ್ಸ್ ಅಷ್ಟೇ ಅಲ್ಲ, ಇಂದು ದುಬೈನ ಒಂದು ಪ್ರತಿಷ್ಠಿತ ಪತ್ರಿಕೆ ಖಲೀಜ್ ಟೈಮ್ಸ್ನಲ್ಲೂ ಕೂಡ ದೆಹಲಿ ಶಿಕ್ಷಣ ವ್ಯವಸ್ಥೆಯನ್ನು ಹೊಗಳಿ ಲೇಖನ ಪ್ರಕಟಿಸಲಾಗಿದ್ದು, A Lesson For Political Parties (ರಾಜಕೀಯ ಪಕ್ಷಗಳಿಗೆ ಒಂದು ಪಾಠ) ಎಂದು ಹೆಡ್ಲೈನ್ ಕೊಟ್ಟಿದೆ. ಹೀಗೆ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ದೆಹಲಿ ಶಿಕ್ಷಣ ವ್ಯವಸ್ಥೆ ಬಗ್ಗೆ ಹೊಗಳಿಕೆಯ ಲೇಖನ ಬರುತ್ತಿದ್ದಂತೆ ಸುದ್ದಿಗೋಷ್ಠಿ ಕರೆದು ಮಾತನಾಡಿದ ಆಪ್ ಸಂಸದ ರಾಘವ್ ಛಡ್ಡಾ, ‘ದೆಹಲಿಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಅದೆರಡೂ ಕ್ಷೇತ್ರವನ್ನು ಅವ್ಯವಸ್ಥೆಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಈಗಾಗಲೇ ಜೈಲು ಸೇರಿದ್ದಾರೆ. ಇದೀಗ ಶಿಕ್ಷಣ ಮಂತ್ರಿ ವಿರುದ್ಧವೂ ಷಡ್ಯಂತ್ರ ನಡೆಯುತ್ತಿದೆ’ ಎಂದು ಆರೋಪ ಮಾಡಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿ ಪೇಡ್ ಎಂದ ಬಿಜೆಪಿ
ಇಂದು ನ್ಯೂಯಾರ್ಕ್ ಟೈಮ್ಸ್ನಲ್ಲಿ ದೆಹಲಿ ಮಾದರಿ ಶಿಕ್ಷಣ ವ್ಯವಸ್ಥೆಯನ್ನು ಶ್ಲಾಘಿಸಿದ್ದನ್ನು ಸಹಿಸಲಾಗದೆ ಕೇಂದ್ರ ಸರ್ಕಾರ ಸಿಬಿಐನ್ನು ಮನೀಷ್ ಸಿಸೋಡಿಯಾ ಮನೆಗೆ ಕಳಿಸಿದೆ ಎಂದು ಆಮ್ ಆದ್ಮಿ ಪಕ್ಷ ಮಾಡಿರುವ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಟ್ವೀಟ್ ಮಾಡಿ, ‘ಅದು ಹೇಗೆ ನ್ಯೂಯಾರ್ಕ್ ಟೈಮ್ಸ್ ಮತ್ತು ಖಲೀಜ್ ಟೈಮ್ಸ್ ಪತ್ರಿಕೆಗಳು ಒಂದೇ ದಿನ ಒಂದೇ ತರದ ವರದಿಯನ್ನು ಪ್ರಕಟಿಸಿ, ಒಂದೇ ರೀತಿಯ ಫೋಟೋಗಳನ್ನೂ ಹಾಕಿವೆ? ಈ ಎರಡೂ ಲೇಖನಗಳಲ್ಲಿನ ಪ್ರತಿ ಶಬ್ದ ನೋಡಿದಾಗಲೂ ಗೊತ್ತಾಗುತ್ತದೆ, ಅದನ್ನು ಒಬ್ಬನೇ ವ್ಯಕ್ತಿ ಬರೆದಿದ್ದಾನೆಂಬುದು. ಹಾಕಲಾದ ಫೋಟೋಗಳು ಕೂಡ ಒಂದೇ ತೆರನಾಗಿದ್ದು, ಅವು ಖಾಸಗಿ ಶಾಲೆಯೊಂದರದ್ದು. ಇದು ಮತ್ತೇನೂ ಅಲ್ಲ, ಪೇಡ್ ಪ್ರಮೋಶನ್ (ಹಣ ಕೊಟ್ಟು ತೆಗೆದುಕೊಂಡ ಪ್ರಚಾರ). ಅದನ್ನು ಹಿಡಿದು ಇವರು ತಮ್ಮ ಮಂತ್ರಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿ ಐಟಿ ಸೆಲ್ನ ದೆಹಲಿ ಘಟಕದ ಉಸ್ತುವಾರಿ ಪುನೀತ್ ಅಗರ್ವಾಲ್ ಟ್ವೀಟ್ ಮಾಡಿ, ‘ನ್ಯೂಯಾರ್ಕ್ ಟೈಮ್ಸ್ ಮತ್ತು ಖಲೀಜ್ ಟೈಮ್ಸ್ಗಳು ಒಂದೇ ವಿಧದ ಲೇಖನವನ್ನು ಪ್ರಕಟಿಸಿವೆ. ಫೋಟೋಗಳೂ ಒಂದೇ ಇವೆ. ಇದನ್ನು ಯಾರೂ ಸುದ್ದಿ ಎನ್ನುವುದಿಲ್ಲ. ಜಾಹೀರಾತು ಎನ್ನುತ್ತಾರೆ. ಮನೀಷ್ ಸಿಸೋಡಿಯಾ ಎಲ್ಲಿರಲು ಯೋಗ್ಯರೋ ಅಲ್ಲಿಗೇ ಹೋಗಬೇಕು. ಅಂದರೆ ಅವರಿರಬೇಕಾದ ಸ್ಥಳ ಜೈಲಿಗೆ ಹೋಗಲೇಬೇಕು’ ಎಂದಿದ್ದಾರೆ.
ದೆಹಲಿಯಲ್ಲಿ ಕಳೆದ ವರ್ಷ ಅನುಷ್ಠಾನಕ್ಕೆ ತರಲಾಗಿದ್ದ ನೂತನ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ, ಅದನ್ನು ಸಿಬಿಐಗೆ ವಹಿಸಬೇಕು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು. ಅದರಂತೆ ಈಗ ಸಿಬಿಐ ತನಿಖೆಯೂ ಪ್ರಾರಂಭವಾಗಿದೆ. ಅಬಕಾರಿ ನೀತಿಯಡಿ ಚಿಲ್ಲರೆ ವ್ಯಾಪಾರಿಗಳಿಗೆ ಪರವಾನಗಿ ನೀಡುವಾಗ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದ್ದು, ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳು, ಪ್ರದೇಶಗಳ ಮೇಲೆ ಸಿಬಿಐ ಕಣ್ಣಿಟ್ಟಿದೆ. ಮುಖ್ಯವಾಗಿ ಅಬಕಾರಿ ಇಲಾಖೆ ಜವಾಬ್ದಾರಿ ಹೊತ್ತ ಮನೀಷ್ ಸಿಸೋಡಿಯಾ ಮತ್ತು ನಾಲ್ವರು ಪ್ರಮುಖ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ.
ಇದನ್ನೂ ಓದಿ: ಮದ್ಯ ನೀತಿ ತಂದಿಟ್ಟ ಸಂಕಷ್ಟ; ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆಗೇನು ಕಾರಣಗಳು?