Site icon Vistara News

ಲಾಲು ಆಪ್ತ ಸುನೀಲ್​ ಸಿಂಗ್​ ಸೇರಿ ಆರ್​​ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ

CBI raids leaders House in land for jobs scam

ನವ ದೆಹಲಿ: ಆರ್​ಜೆಡಿ ನಾಯಕ ಲಾಲು ಪ್ರಸಾದ್​ ಆಪ್ತ ಸುನೀಲ್​ ಸಿಂಗ್​​ ಮತ್ತು ಇತರ ಹಲವು ನಾಯಕರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಸಿಬಿಐ ದಾಳಿಯಾಗಿದೆ. ಲಾಲೂ ಪ್ರಸಾದ್​ ಸಿಂಗ್​​ ಕೇಂದ್ರದಲ್ಲಿ ರೈಲ್ವೆ ಸಚಿವ ಆಗಿದ್ದಾದ ನಡೆದ, ಉದ್ಯೋಗಕ್ಕಾಗಿ ಭೂಮಿ (ಯಾರು ಭೂಮಿಯನ್ನು ಕೊಡುತ್ತಾರೋ, ಅವರು ಅನರ್ಹರಾಗಿದ್ದರೂ ಉದ್ಯೋಗ ಕೊಡಿಸಿದ ಹಗರಣ) ಹಗರಣ ಸಂಬಂಧಿತ ಕೇಸ್​​ನಲ್ಲಿ ಸಿಬಿಐ ದಾಳಿ ಮಾಡಿದೆ. ಸುನೀಲ್​ ಸಿಂಗ್​​ ಅಷ್ಟೇ ಅಲ್ಲದೆ, ಸುಬೋಧ್​ ರಾಯ್​, ಅಷ್ಫಾಕ್ ಕರೀಮ್ ಮತ್ತು ಫೈಯಾಜ್ ಅಹ್ಮದ್​​​ ಮನೆಗಳಲ್ಲಿ ಕೂಡ ಸಿಬಿಐ ಶೋಧ ನಡೆಸಿದೆ.

ಲಾಲು ಪ್ರಸಾದ್​ ಯಾದವ್​ 2004ರಿಂದ 2009ರವರೆಗೆ ಕೇಂದ್ರ ಸರ್ಕಾರದಲ್ಲಿ ಯುಪಿಎ ಸರ್ಕಾರವಿದ್ದಾಗ ರೈಲ್ವೆ ಸಚಿವರಾಗಿದ್ದರು. ಈ ಅವಧಿಯಲ್ಲಿ ಬಿಹಾರದಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ನಡೆದಿದೆ ಎಂಬ ಆರೋಪವಿದೆ. ಲಾಲು ಪ್ರಸಾದ್​ ಯಾದವ್​, ಪತ್ನಿ ರಾಬ್ರಿ ಯಾದವ್​, ಮಕ್ಕಳಾದ ಮಿಸಾ ಯಾದವ್​, ಹೇಮಾ ಯಾದವ್​ ಮತ್ತು ಇನ್ನೂ ಹಲವರ ಹೆಸರನ್ನು ಸಿಬಿಐ ಎಫ್​ಐಆರ್​​ನಲ್ಲಿ ಉಲ್ಲೇಖಿಸಿದೆ. ಉದ್ಯೋಗ ಬೇಕೆಂದರೆ ಭೂಮಿ ಕೊಡಿ ಎಂದು ಹೇಳಿ, ಅತ್ಯಂತ ಕಡಿಮೆ ಬೆಲೆಗೆ ಭೂಮಿಯನ್ನು ತೆಗೆದುಕೊಂಡು, ರೈಲ್ವೆ ಇಲಾಖೆಯಲ್ಲಿನ ಡಿ ದರ್ಜೆಯ ಉದ್ಯೋಗಗಳನ್ನು ಅನರ್ಹರಿಗೆ ಕೊಟ್ಟಿದ್ದಲ್ಲದೆ, ಆ ಭೂಮಿಯನ್ನು ತಮ್ಮ ಕುಟುಂಬ ಸದಸ್ಯರಿಗೇ ವರ್ಗಾಯಿಸಿಕೊಂಡಿರುವ ಆರೋಪ ಇದು. ಇದರಲ್ಲಿ ಹಲವು ಕೋಟಿ ರೂಪಾಯಿಗಳಷ್ಟು ಗೋಲ್​ ಮಾಲ್​ ಆಗಿದೆ ಎನ್ನಲಾಗಿದ್ದು, ಸಿಬಿಐ ತನಿಖೆ ನಡೆಯುತ್ತಿದೆ. ಇದೇ ವರ್ಷ ಮೇ ತಿಂಗಳಲ್ಲಿ ಆರ್​ಜೆಡಿ ನಾಯಕರಿಗೆ ಸಂಬಂಧಪಟ್ಟ 17 ಸ್ಥಳಗಳ ಮೇಲೆ ರೇಡ್​ ಆಗಿತ್ತು.

ಇದನ್ನೂ ಓದಿ: ಮೆಟ್ಟಿಲು ಇಳಿಯುವಾಗ ಆಯ ತಪ್ಪಿದ ಲಾಲು ಪ್ರಸಾದ್‌ ಯಾದವ್‌; ಭುಜ, ಬೆನ್ನಿನಲ್ಲಿ ಫ್ರಾಕ್ಚರ್

Exit mobile version