Site icon Vistara News

Coal Scam Case | ಪಶ್ಚಿಮ ಬಂಗಾಳದ ಕಾನೂನು ಸಚಿವನಿಗೆ ಸಂಕಷ್ಟ; ಐದು ನಿವಾಸಗಳ ಮೇಲೆ ಸಿಬಿಐ ರೇಡ್​

Moloy Ghatak

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ತನಿಖಾ ದಳಗಳ ರೇಡ್ ಮುಂದುವರಿದಿದೆ. ಈ ಸಲ ಸಿಬಿಐ ದಾಳಿ ಮಾಡಿದ್ದು ಪಶ್ಚಿಮ ಬಂಗಾಳ ಕಾನೂನು ಮತ್ತು ಕಾರ್ಮಿಕ ಇಲಾಖೆ ಸಚಿವ ಮಲಯ್​ ಘಟಕ್​​ ನಿವಾಸದ ಮೇಲೆ. ಕೋಲ್ಕತ್ತಾ ಮತ್ತು ಅಸಾನ್ಸೋಲ್​ನಲ್ಲಿರುವ ಮಲಯ್​ ಘಟಕ್​ಗೆ ಸೇರಿದ ಒಟ್ಟು ಐದು ನಿವಾಸಗಳನ್ನು ಸಿಬಿಐ ಶೋಧ ಮಾಡಿದೆ. ಅಂದಹಾಗೇ, ಈ ಸಚಿವರ ವಿರುದ್ಧ ಸಿಬಿಐ ಅಟ್ಯಾಕ್​ ಆಗಿದ್ದು, ಕಲ್ಲಿದ್ದಲು ಸಕ್ರಮ ಸಾಗಣೆ ಕೇಸ್​​ನಲ್ಲಿ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಪಟ್ಟ ಕೇಸ್​​ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಲಯ್​ ಘಟಕ್​​ರಿಗೆ ಸಿಬಿಐ ಹಲವು ಬಾರಿ ಸಮನ್ಸ್​ ಜಾರಿ ಮಾಡಿತ್ತು. ಆದರೆ ಮಲಯ್​ ಅದಕ್ಕೆ ಸ್ಪಂದಿಸಿರಲಿಲ್ಲ. ಹೀಗಾಗಿ ಸಿಬಿಐ ರೇಡ್​ ಮಾಡಿದೆ. ಭಾನುವಾರದಿಂದಲೇ ಕಾರ್ಯಾಚರಣೆ ಶುರುವಾಗಿತ್ತು. ಅಂದು ಮುಂಜಾನೆ ಅಸಾನ್ಸೋಲ್​​ನಲ್ಲಿರುವ ಎರಡು ಮನೆ ಮತ್ತು ಚೆಲಿಡಂಗಾದಲ್ಲಿರುವ ಒಂದು ಮನೆಯ ಸುತ್ತಲೂ ಕೇಂದ್ರೀಯ ಸಶಸ್ತ್ರ ಪಡೆಗಳ ಸಿಬ್ಬಂದಿ ಸುತ್ತುವರಿದಿದ್ದರು. ಮಂಗಳವಾರ ಮುಂಜಾನೆಯೇ ಸಿಬಿಐನ ಆರು ಸಿಬ್ಬಂದಿ ಅಸಾನ್ಸೋಲ್​​ನ ಮನೆಗೆ ತಲುಪಿ ಶೋಧ ಕಾರ್ಯ ನಡೆಸಿದರು. ಅದಾದ ಬಳಿಕ ಅಲಿಪೋರ್​, ಲೇಕ್​ ಗಾರ್ಡನ್ಸ್​, ರಾಜ ಭವನದ ಸಮೀಪ ಇರುವ ಮನೆಗಳಲ್ಲೂ ರೇಡ್ ಮಾಡಿದ್ದಾರೆ. ಮಲಯ್​ ಘಟಕ್​ ಈಗ ವಾಸವಾಗಿದ್ದ ಮನೆಯಲ್ಲೂ ಸಿಬಿಐ ರೇಡ್ ಮಾಡಿದೆ. ಈ ವೇಳೆ ಮಲಯ್​ ಮನೆಯಲ್ಲಿ ಇರಲಿಲ್ಲ. ಅವರ ಪತ್ನಿ ಮಾತ್ರ ಇದ್ದರು. ಈ ಸಚಿವರು ಇ.ಡಿ. ಕಣ್ಗಾವಲಿನಲ್ಲೂ ಇದ್ದಾರೆ.

ಕಲ್ಲಿದ್ದಲು ಅಕ್ರಮ ಮಾರಾಟ ಹಗರಣದಡಿ ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಐಪಿಎಸ್​ ಅಧಿಕಾರಿಗಳಾದ ಜ್ಞಾನವಂತ್ ಸಿಂಗ್, ಕೋಟೇಶ್ವರ ರಾವ್, ಎಸ್.ಸೆಲ್ವಮುರುಗನ್, ಶ್ಯಾಮ್ ಸಿಂಗ್, ರಾಜೀವ್ ಮಿಶ್ರಾ, ಸುಕೇಶ್ ಕುಮಾರ್ ಜೈನ್ ಮತ್ತು ತಥಾಗತ ಬಸು ಎಂಬುವರಿಗೆ ಸಮನ್ಸ್​ ನೀಡಿತ್ತು. ಕಲ್ಲಿದ್ದಲು ಅಕ್ರಮ ಗಣಿಗಾರಿಕೆ, ಸಾಗಣೆ ನಡೆಯುತ್ತಿದ್ದುದು ಇವರಿಗೆಲ್ಲ ಗೊತ್ತಿತ್ತಾದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರಲ್ಲೂ ಕೆಲವು ಅಧಿಕಾರಿಗಳಂತೂ ಕಲ್ಲಿದ್ದಲು ಅಕ್ರಮ ಸಾಗಣೆಗೆ ಸಹಾಯವನ್ನೂ ಮಾಡಿದ್ದಾರೆ. ಕಲ್ಲಿದ್ದಲು ಹೊತ್ತ ವಾಹನ ಯಾವುದೇ ತೊಂದರೆಯಿಲ್ಲದೆ, ತಲುಪಬೇಕಾದ ಸ್ಥಳಕ್ಕೆ ಹೋಗಲು ಇವರೇ ಖುದ್ದಾಗಿ ನಿಂತು ವ್ಯವಸ್ಥೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

19 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಈ ಕಲ್ಲಿದ್ದಲು ಹಗರಣದಲ್ಲಿ, ಮಮತಾ ಬ್ಯಾನರ್ಜಿ ಹತ್ತಿರದ ಸಂಬಂಧಿ ಅಭಿಷೇಕ್​ ಬ್ಯಾನರ್ಜಿಯವರ ಆಪ್ತ, ಟಿಎಂಸಿ ಯುವ ನಾಯಕ ವಿನಯ್​ ಮಿಶ್ರಾ ಪ್ರಮುಖ ಆರೋಪಿ. ಈ ಕೇಸ್​​ನಲ್ಲಿ ಅಭಿಷೇಕ್​ ಬ್ಯಾನರ್ಜಿ ಕೂಡ ಈಗಾಗಲೇ ಇಡಿ ಮತ್ತು ಸಿಬಿಐ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದಾರೆ.

ಇದನ್ನೂ ಓದಿ: TMC Worker Killed | ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ, ರಾಜಕೀಯ ಪ್ರೇರಿತ ದಾಳಿ ಶಂಕೆ

Exit mobile version