ಚೆನ್ನೈ: ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರ ಚೆನ್ನೈನಲ್ಲಿರುವ ಮನೆಯ ಮೇಲೆ ಸಿಬಿಐ ದಾಳಿ ಮಾಡಿದೆ. ಇಲ್ಲಿನ ನುಂಗಾಂಬಕ್ಕಮ್‌ನಲ್ಲಿರುವ ಮನೆಗೆ ಸಿಬಿಐನ ಆರು ಮಂದಿ ಅಧಿಕಾರಿಗಳು ಆಗಮಿಸಿ, ಮನೆಯನ್ನು ರೈಡ್ ಮಾಡಿದ್ದಾರೆ. ಅದರಲ್ಲೂ ಒಂದು ಕೋಣೆಯನ್ನು ತೀವ್ರವಾಗಿ ಶೋಧಿಸಿದ್ದಾರೆ ಎಂದು ಹೇಳಲಾಗಿದೆ. ಅಂದರೆ ಕಳೆದ ಬಾರಿ ಸಿಬಿಐ ಅಧಿಕಾರಿಗಳು ಕಾರ್ತಿ ಚಿದಂಬರಂ ಮನೆಗೆ ಬಂದಿದ್ದಾಗ ಇಡೀ ಮನೆಯನ್ನು ಶೋಧಿಸಿದ್ದರು. ಆದರೆ ಆಗ ಕಾರ್ತಿ ಚಿದಂಬರಂ ಅವರ ಪತ್ನಿಯ ಕೋಣೆಗೆ ಬೀಗಹಾಕಲಾಗಿತ್ತು. ಆಕೆ ಲಂಡನ್‌ನಲ್ಲಿ ಇದ್ದರು ಮತ್ತು ಕೀ ಅವರ ಬಳಿಯೇ ಇತ್ತು. ಈಗ ಅವರು ವಾಪಸ್ ಆಗಿದ್ದರಿಂದ ಸಿಬಿಐ ಅಧಿಕಾರಿಗಳು ಮತ್ತೆ ಬಂದು ರೇಡ್ ಮಾಡಿದ್ದಾರೆ.
ಚೀನಾದ ಸುಮಾರು 263 ಪ್ರಜೆಗಳಿಗೆ ಅಕ್ರಮವಾಗಿ ವೀಸಾ ಕೊಡಿಸಲು ಸುಮಾರು 50 ಲಕ್ಷ ಲಂಚ ಪಡೆದಿದ್ದರು ಎಂಬ ಆರೋಪದಡಿ ಮೇ ತಿಂಗಳಲ್ಲಿ ಸಿಬಿಐ ಚಿದಂಬರಂ ಮತ್ತು ಕಾರ್ತಿ ಚಿದಂಬರಂ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. 2011ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ, ಚಿದಂಬರಂ ಗೃಹ ಸಚಿವರಾಗಿದ್ದಾಗ ಪಂಜಾಬ್‌ನಲ್ಲಿ ಅನುಷ್ಠಾನಗೊಳಿಸಲಾದ ತಲ್ವಾಂಡಿ ಸಾಬೋ ಪವರ್ ಪ್ರಾಜೆಕ್ಟ್‌ಗೆ ಸಂಬಂಧಪಟ್ಟ ಕೇಸ್ ಇದು. ಈ ಥರ್ಮಲ್ ಪ್ಲಾಂಟ್ ನಿರ್ಮಾಣದಲ್ಲಿ ಚೀನಾದ ತಜ್ಞರು, ಕೆಲಸಗಾರರ ಸಹಾಯ ತೆಗೆದುಕೊಳ್ಳಬೇಕಿತ್ತು. ಅದಕ್ಕಾಗಿ ಅವರಿಗೆ ಭಾರತಕ್ಕೆ ಬರಲು ಅಕ್ರಮ ವೀಸಾ ಕೊಡಿಸಲು 50ಲಕ್ಷ ರೂ.ಪಡೆದಿದ್ದರು ಎಂಬ ಆರೋಪವಿದೆ. ಈಗ ಸಿಬಿಐ ದಾಳಿ ನಡೆಸಿದ್ದು ಇದೇ ಕೇಸ್‌ಗೆ ಸಂಬಂಧಪಟ್ಟೋ ಅಥವಾ ಇನ್ಯಾವುದೇ ಪ್ರಕರಣಕ್ಕೆ ಸಂಬಂಧಪಟ್ಟೋ ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: CBI Raids: ಕಾರ್ತಿ ಚಿದಂಬರಂಗೆ ಸೇರಿದ 9 ಕಚೇರಿಗಳ ಮೇಲೆ ದಾಳಿ