ನವ ದೆಹಲಿ: ದೆಹಲಿ ಅಬಕಾರಿ ಅಕ್ರಮ ಹಗರಣಕ್ಕೆ (Delhi Liquor Scam) ಸಂಬಂಧಪಟ್ಟಂತೆ ಅಲ್ಲಿನ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಿಬಿಐ ಭಾನುವಾರ ಮತ್ತೊಮ್ಮೆ ಸಮನ್ಸ್ ನೀಡಿದೆ. ಕಳೆದ ವರ್ಷ ದೆಹಲಿ ಹೊಸ ಅಬಕಾರಿ ನೀತಿಯನ್ನು ಆಪ್ ಸರ್ಕಾರ ಜಾರಿಗೊಳಿಸಿತ್ತು. ಆದರೆ ಈ ವೇಳೆ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ, ಸಿಬಿಐ ತನಿಖೆಗೆ ವಹಿಸಬೇಕು ಎಂದು ಅಲ್ಲಿನ ರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದು. ಅದರಂತೆ ಈಗ ಇಡಿ ಮತ್ತು ಸಿಬಿಐ ಎರಡೂ ತನಿಖಾ ದಳಗಳೂ ಈ ಕೇಸ್ನ್ನು ತನಿಖೆಗೆ ಕೈಗೆತ್ತಿಕೊಂಡಿವೆ. ಈಗಾಗಲೇ ಹಲವರ ಬಂಧನವಾಗಿದೆ. ದೆಹಲಿ ಅಬಕಾರಿ ಇಲಾಖೆ ಜವಾಬ್ದಾರಿ ಮನೀಶ್ ಸಿಸೋಡಿಯಾ ಅವರದ್ದೇ ಆಗಿರುವುದರಿಂದ, ಅವರನ್ನೂ ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದ್ದು, ಈಗ ಮತ್ತೊಮ್ಮೆ ಸಿಬಿಐನಿಂದ ಸಮನ್ಸ್ ಜಾರಿ ಮಾಡಿದೆ.
ಈ ಬಗ್ಗೆ ಮನೀಷ್ ಸಿಸೋಡಿಯಾ ಅವರು ಟ್ವೀಟ್ ಮಾಡಿಕೊಂಡು, ‘ನಾನು ಸದಾ ತನಿಖೆಗೆ ಸಹಕರಿಸುತ್ತೇನೆ’ ಎಂದಿದ್ದಾರೆ. ‘ಸಿಬಿಐ ಮತ್ತೆ ಸಮನ್ಸ್ ನೀಡಿದೆ. ಈಗಾಗಲೇ ನನ್ನ ವಿಚಾರಣೆ ಆಗಿದೆ. ನನ್ನ ಮನೆ ಮೇಲೆ ದಾಳಿಯೂ ಆಗಿದೆ. ಬ್ಯಾಂಕ್ ಲಾಕರ್ ಶೋಧವಾಗಿದೆ. ಇಷ್ಟೆಲ್ಲ ಆದರೂ ಅವರಿಗೆ ಏನೂ ಸಿಕ್ಕಿರಲಿಲ್ಲ. ಈಗ ಮತ್ತೆ ವಿಚಾರಣೆಗೆ ಕರೆದಿದ್ದಾರೆ. ದೆಹಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಮಾಡಿದ್ದೇನೆ. ಅದಕ್ಕೂ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಲು ಯತ್ನಿಸುತ್ತಿದೆ. ಎಷ್ಟೇ ಸಲ ವಿಚಾರಣೆಗೆ ಕರೆದರೂ ನಾನು ಸಹಕರಿಸುತ್ತೇನೆ’ ಎಂದು ಹೇಳಿದ್ದಾರೆ.