ನವ ದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಕಲ್ವಕುಂಟ್ಲ ಅವರಿಗೆ ಸಿಬಿಐ ಸಮನ್ಸ್ ನೀಡಿದ್ದು, ಡಿಸೆಂಬರ್ 6ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ದೆಹಲಿಯಲ್ಲಿ ನೂತನ ಅಬಕಾರಿ ನೀತಿ ಜಾರಿ ಮಾಡುವ ವೇಳೆ ಲೈಸೆನ್ಸ್ ಕೊಡುವ ವಿಚಾರದಲ್ಲಿ ದೊಡ್ಡಮಟ್ಟದ ಹಗರಣ ಆಗಿದೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಿಬಿಐ ತನಿಖೆ ನಡೆಸುತ್ತಿದೆ. ಇ.ಡಿ.ಕೂಡ ದಾಳಿ ನಡೆಸಿ, ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಪ್ರಮುಖ ಆರೋಪಿ ಅಲ್ಲಿನ ಉಪಮುಖ್ಯಮಂತ್ರಿ, ಅಬಕಾರಿ ಇಲಾಖೆ ಉಸ್ತುವಾರಿ ಹೊತ್ತಿದ್ದ ಮನೀಶ್ ಸಿಸೋಡಿಯಾ ಎಂದು ಸಿಬಿಐ ಎಫ್ಐಆರ್ನಲ್ಲಿ ದಾಖಲಿಸಿದೆ. ಸಿಸೋಡಿಯಾ ಆಪ್ತರು, ಕೆಲವು ಲಿಕ್ಕರ್ ಉದ್ಯಮಿಗಳು ಸೇರಿ ಇದುವರೆಗೆ ಆರು ಜನರನ್ನು ತನಿಖಾದಳಗಳು ಬಂಧಿಸಿವೆ.
ಹೀಗೆ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಪಟ್ಟು ಹಲವರನ್ನು ವಿಚಾರಣೆಗೆ ಒಳಪಡಿಸಿದಾಗ, ತನಿಖೆ ನಡೆಸಿದಾಗ ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕಿ ಕವಿತಾ ಅವರಿಗೆ ಪರಿಚಿತವಿದೆ ಎನ್ನಲಾದ ಅಂಶಗಳು ಬೆಳಕಿಗೆ ಬಂದಿವೆ. ತನಿಖೆಯ ಕೆಲ ಅಂಶಗಳು ಅವರ ಕಡೆಗೆ ಬೊಟ್ಟು ಮಾಡುತ್ತಿವೆ. ಹೀಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಬೇಕಾದ ಅಗತ್ಯತೆ ಇದೆ ಎಂದು ಸಿಬಿಐ ತನ್ನ ನೋಟಿಸ್ನಲ್ಲಿ ಉಲ್ಲೇಖಿಸಿದೆ.
ದೆಹಲಿ ಅಬಕಾರಿ ಅಕ್ರಮ ಮತ್ತು ಭ್ರಷ್ಟಾಚಾರದಲ್ಲಿ ಕವಿತಾ ಕಲ್ವಕುಂಟ್ಲ ಪಾತ್ರವಿದೆ ಎಂಬ ಆರೋಪ ಆಗಸ್ಟ್ನಲ್ಲೇ ಕೇಳಿಬಂದಿತ್ತು. ಆಗ ಬಿಜೆಪಿ ತೆಲಂಗಾಣ ರಾಜ್ಯ ಮುಖ್ಯಸ್ಥ ಬಂಡಿ ಸಂಜಯ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರೆಲ್ಲ ಸೇರಿ, ಪ್ರತಿಭಟನೆ ನಡೆಸಿ ಕವಿತಾ ಅವರು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು. ಆಗ ಕವಿತಾ ಕಲ್ವಕುಂಟ್ಲ ತಮ್ಮ ಮೇಲಿನ ಆರೋಪ ಅಲ್ಲಗಳೆದಿದ್ದರು. ತನಿಖಾ ದಳಗಳು ಕೇಂದ್ರದ ಕೈಯಲ್ಲೇ ಇರುವುದರಿಂದ, ಅದು ಬೇಕಾದಂತೆ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ಇದೀಗ ಸಿಬಿಐ ಸಮನ್ಸ್ ಬಂದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿ ‘ಹೌದು, ನನಗೆ ಸಿಬಿಐನಿಂದ ನೋಟಿಸ್ ಬಂದಿದೆ. ಅವರೇ ಸೂಚಿಸಿದಂತೆ ಡಿಸೆಂಬರ್ 6ರಂದು, ಹೈದರಾಬಾದ್ನಲ್ಲಿರುವ ನನ್ನ ಮನೆಯಲ್ಲೇ ಸಿಬಿಐ ಅಧಿಕಾರಿಗಳನ್ನು ಭೇಟಿಯಾಗಿ, ವಿಚಾರಣೆ ಎದುರಿಸುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: Delhi Excise Policy Case | ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಆಪ್ತ ಕಾರ್ಯದರ್ಶಿಯ ಬಂಧನ