ನವದೆಹಲಿ: ನೂತನ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಸರ್ಕಾರಿ ಶಾಲೆಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಹಗರಣವು ದೆಹಲಿ ಸರ್ಕಾರಕ್ಕೆ ಇಕ್ಕಟ್ಟು ತಂದೊಡ್ಡಿರುವ ಬೆನ್ನಲ್ಲೇ ಮತ್ತೊಂದು ಸಂಕಷ್ಟ (AAP In Trouble) ಎದುರಾಗಿದೆ. ದೆಹಲಿ ಟಾನ್ಸ್‌ಪೋರ್ಟ್ ಕಾರ್ಪೊರೇಷನ್ (DTC)ನಿಂದ ಸಾವಿರ ಬಸ್ ಖರೀದಿಯ ವೇಳೆ ಅಕ್ರಮ ನಡೆದಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಅನುಮತಿ ನೀಡಿದ್ದಾರೆ. ಇದರಿಂದ ಮತ್ತೊಂದು ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಯಲಿದೆ.
ಒಂದು ಸಾವಿರ ಬಸ್‌ಗಳ ಖರೀದಿಗಾಗಿ ೨೦೧೯ ಹಾಗೂ ೨೦೨೦ರಲ್ಲಿ ಕರೆದ ಗುತ್ತಿಗೆ ವೇಳೆ ಅಕ್ರಮ ನಡೆದಿದೆ. ಅಲ್ಲದೆ, ಬಸ್ ಖರೀದಿ ಗುತ್ತಿಗೆ ಸಮಿತಿಗೆ ದೆಹಲಿ ಸಾರಿಗೆ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದು ಪೂರ್ವ ನಿಯೋಜಿತವಾಗಿ ನಡೆದ ಹಗರಣ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ವಿ.ಕೆ.ಸಕ್ಸೇನಾ ಅವರಿಗೆ ಶಿಫಾರಸು ಮಾಡಲಾಗಿತ್ತು. ಶಿಫಾರಸಿಗೆ ಈಗ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ.
ಈಗಾಗಲೇ ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ. ಶಾಲೆಗಳ ನಿರ್ಮಾಣ ಪ್ರಕರಣವೂ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಪ್ ಶಾಸಕ ಸೌರಭ್ ಭಾರದ್ವಾಜ್, “ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಆರೋಪ ಕೇಳಿಬಂದಿರುವ ಕಾರಣ, ಅವುಗಳನ್ನು ಮುಚ್ಚಿಹಾಕಲು ಇಂತಹ ತಂತ್ರ ಮಾಡುತ್ತಿದ್ದಾರೆ” ಎಂದು ದೂರಿದ್ದಾರೆ. ಈಗಾಗಲೇ ಕೇಂದ್ರದ ವಿರುದ್ಧ ಅರವಿಂದ ಕೇಜ್ರಿವಾಲ್ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಬಿಜೆಪಿಯಿಂದ ಬಂದಿತ್ತು ಸಿಎಂ ಪೋಸ್ಟ್ ಆಫರ್, ಶಾಸಕರಿಗೆ 20 ಕೋಟಿ ಆಮಿಷ: ಮನೀಷ್ ಸಿಸೋಡಿಯಾ ಆರೋಪ