Site icon Vistara News

ಸಚಿವ ಸೆಂಥಿಲ್ ಬಾಲಾಜಿ ಬಂಧನದ ಬೆನ್ನಲ್ಲೇ ಸಿಬಿಐ ವಿರುದ್ಧ ಮಹತ್ವದ ಹೆಜ್ಜೆ ಇಟ್ಟ ತಮಿಳುನಾಡು ಸರ್ಕಾರ!

MK Stalin And CBI

#image_title

ಚೆನ್ನೈ: ತಮಿಳುನಾಡು ವಿದ್ಯುತ್​ ಮತ್ತು ಅಬಕಾರಿ ಸಚಿವ ವಿ. ಸೆಂಥಿಲ್ ಬಾಲಾಜಿ (V. Senthil Balaji) ಅವರನ್ನು, ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸುತ್ತಿದ್ದಂತೆ, ತಮಿಳುನಾಡು ಸರ್ಕಾರ ಸಿಬಿಐ ವಿರುದ್ಧ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿನ ಯಾವುದೇ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐಗೆ ತಮಿಳುನಾಡು ಸರ್ಕಾರ ನೀಡಿದ್ದ ಸಾಮಾನ್ಯ ಒಪ್ಪಿಗೆ (General Consent)ಯನ್ನು ಹಿಂಪಡೆದಿದೆ. ಅಂದರೆ ಸಿಬಿಐ ತನಿಖಾ ದಳ ಇನ್ನು ಮುಂದೆ ತಮಿಳುನಾಡಿನಲ್ಲಿ ಯಾವುದೇ ಕೇಸ್​​ನ ತನಿಖೆ ನಡೆಸುವುದಾದರೂ ಕೇವಲ ಕೇಂದ್ರ ಸರ್ಕಾರದ ಸೂಚನೆ ಸಾಕಾಗುವುದಿಲ್ಲ, ಅದಕ್ಕೆ ತಮಿಳುನಾಡು ಸರ್ಕಾರವೂ ಅನುಮತಿ ಕೊಡಬೇಕಾಗುತ್ತದೆ.

‘ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ, 1946 (Delhi Special Police Establishment Act, 1946)ಯಡಿ ಸಿಬಿಐ ತನಿಖಾ ದಳ ನಿಯಂತ್ರಿಸಲ್ಪಡುತ್ತದೆ. ಯಾವುದೇ ರಾಜ್ಯದಲ್ಲಿ, ಯಾವುದೇ ಪ್ರಕರಣಗಳನ್ನು ತನಿಖೆ ನಡೆಸಬೇಕಾದರೂ ಆಯಾ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು ಎಂಬುದನ್ನು ಈ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ದಾಗ್ಯೂ ಯಾವುದೇ ರಾಜ್ಯ ಸರ್ಕಾರಗಳು ಸಿಬಿಐಗೆ ಸಾಮಾನ್ಯ ಅನುಮತಿ (General Consent) ಕೊಟ್ಟಿಟ್ಟಿದ್ದರೆ, ಅಂಥ ರಾಜ್ಯಗಳಲ್ಲಿ ತನಿಖೆಗೆ ಸರ್ಕಾರಗಳ ಅನುಮತಿಯನ್ನು ಹೊಸದಾಗಿ ಪಡೆಯುವ ಅಗತ್ಯ ತನಿಖಾ ದಳಕ್ಕೆ ಇರುವುದಿಲ್ಲ. ಹಾಗೇ, ರಾಜ್ಯಗಳು ಕೂಡ ಯಾವುದೇ ಕ್ಷಣದಲ್ಲಿ ಸಿಬಿಐಗೆ ಕೊಟ್ಟಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಬಹುದು. ಇದರ ಹೊರತಾಗಿ ಸುಪ್ರೀಂಕೋರ್ಟ್, ಹೈಕೋರ್ಟ್​​ಗಳು, ಯಾವುದೇ ಕೇಸ್​​ನ ತನಿಖೆಯನ್ನು ನೇರವಾಗಿ ಸಿಬಿಐಗೆ ವಹಿಸಬಹುದು.

ಇದೀಗ ತಮಿಳುನಾಡು ಗೃಹ ಇಲಾಖೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ದೆಹಲಿ ವಿಶೇಷ ಪೊಲೀಸ್​ ಸ್ಥಾಪನಾ ಕಾಯ್ದೆಯ ಸೆಕ್ಷನ್​ 6ರಲ್ಲಿ ಉಲ್ಲೇಖವಾದ ನಿಯಮದ ಅನ್ವಯ, ಇನ್ನು ಮುಂದೆ ತಮಿಳುನಾಡಿನಲ್ಲಿ ಸಿಬಿಐ ಯಾವುದೇ ಕೇಸ್​​ನ ತನಿಖೆ ಶುರು ಮಾಡುವುದಕ್ಕೂ ಮುನ್ನ ನಮ್ಮ ಅನುಮತಿ ಪಡೆಯಬೇಕು ಎಂದು ಹೇಳಿದೆ. ವಿ.ಬಾಲಾಜಿ ಸೆಂಥಿಲ್ ಅವರು 2011ರಿಂದ 2016ರವರೆಗೆ ಎಐಎಡಿಎಂಕೆ ಸರ್ಕಾರದಲ್ಲಿ (ಜಯಲಲಿತಾ ಸಿಎಂ ಆಗಿದ್ದಾಗ) ಸಾರಿಗೆ ಸಚಿವರಾಗಿದ್ದರು. ಈ ವೇಳೆ ಅವರು ಉದ್ಯೋಗಕ್ಕಾಗಿ ಹಣ ಪಡೆದು ದೊಡ್ಡ ಮಟ್ಟದ ಸ್ಕ್ಯಾಮ್​ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದರ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ರೇಡ್ ಮಾಡಿತ್ತು. ಹಣ ಅಕ್ರಮ ವರ್ಗಾವಣೆ ಆರೋಪವೂ ಇದ್ದಿದ್ದರಿಂದ ಇಡಿ ಅಧಿಕಾರಿಗಳೂ ಸೆಂಥಿಲ್​ರನ್ನು 18 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿ, ಬುಧವಾರ ಮುಂಜಾನೆ ಅವರನ್ನು ಬಂಧಿಸಿದ್ದಾರೆ. ಸದ್ಯ ಬೈಪಾಸ್ ಸರ್ಜರಿಗೆ ಒಳಗಾಗಿರುವ ಸೆಂಥಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಬಂಧಿತ ಸಚಿವನಿಗೆ ಅರ್ಜೆಂಟ್ ಬೈಪಾಸ್ ಸರ್ಜರಿ; ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪತ್ನಿ

ಸೆಂಥಿಲ್​ ಬಂಧನವಾದ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆಲ್ಲ ಕಾನೂನು ಪ್ರಕಾರವೇ ಉತ್ತರ ಕೊಡುತ್ತೇವೆ ಎಂದೂ ಹೇಳಿದ್ದಾರೆ. ಇದೀಗ ಸಿಬಿಐಗೆ ಕೊಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನೂ ಇಲ್ಲಿನ ಸರ್ಕಾರ ತೆಗೆದುಹಾಕಿದೆ. ಇನ್ನುಳಿದಂತೆ ಪಂಜಾಬ್​, ರಾಜಸ್ಥಾನ, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಕೇರಳ, ಜಾರ್ಖಂಡ, ಮಹಾರಾಷ್ಟ್ರ ರಾಜ್ಯಗಳು ಈಗಾಗಲೇ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದು ಆಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version