ನವದೆಹಲಿ: 2023ರಿಂದ ಸಿಬಿಎಸ್‌ಇ(ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ) 10 ಮತ್ತು 12ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಒಂದಿಷ್ಟು ಬದಲಾವಣೆಗಳ್ನು ಮಾಡಲಾಗಿದೆ. 10ನೇ ತರಗತಿ ಪರೀಕ್ಷೆಯಲ್ಲಿ ಶೇ.40 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ಶೇ.30ರಷ್ಟು ಪ್ರಶ್ನೆಗಳು ಸಾಮರ್ಥ್ಯವನ್ನಾಧರಿಸಿದ ಪ್ರಶ್ನೆಗಳು ಇರಲಿವೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ತಿಳಿಸಿದೆ(CBSE board exams 2023).
ಈ ಸಾಮರ್ಥ್ಯವನ್ನಾಧರಿಸಿದ ಪ್ರಶ್ನೆಗಳು ವಸ್ತುನಿಷ್ಠ, ಪ್ರತಿಕ್ರಿಯೆ, ಸಮರ್ಥನೆ ಮತ್ತು ತಾರ್ಕಿಕತೆ ಮತ್ತು ಕೇಸ್ ಸ್ಟಡಿಯ ಬಹು ಸ್ವರೂಪಗಳನ್ನು ಒಳಗೊಂಡಿರುತ್ತವೆ ಎಂದು ಲೋಕಸಭೆಗೆ ಶಿಕ್ಷಣ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು ತಿಳಿಸಿದ್ದಾರೆ. ಈ ಸಂಬಂಧ ಸಂಸದರೊಬ್ಬರು ಲಿಖಿತ ಪ್ರಶ್ನೆ ಕೇಳಿದ್ದರು.
ಎನ್‌ಇಪಿ 2020ರ ಪ್ರಕಾರ, ಸಿಬಿಎಸ್‌ಇ ಪರೀಕ್ಷೆಗಳ ಗುಣಮಟ್ಟವನ್ನು ಹೆಚ್ಚಿಸಲು ಹಲವು ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿಯೇ 10 ಮತ್ತು 12ನೇ ಬೋರ್ಡ್ ಪರೀಕ್ಷೆಗಳಲ್ಲಿ ಸಾಮರ್ಥ್ಯ ಆಧಾರಿತ ಪ್ರಶ್ನೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
2023ರ ಫೆಬ್ರವರಿ 15ರಿಂದ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಥಿಯರಿ ಎಕ್ಸಾಮ್‌ಗಳು ಶುರುವಾಗಲಿವೆ. ಹೀಗಿದ್ದೂ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು ಇನ್ನಷ್ಟೇ ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಬೇಕಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಬಳಿಕ, ಅದರಲ್ಲಿ ಸೂಚಿಸಲಾದ ಶಿಫಾರಸುಗಳನ್ನು ಅನುಸರಿಸುವಂತೆ ಸಂಯೋಜಿತ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಸಚಿವೆ ಅನ್ನಪೂರ್ಣ ದೇವಿ ಅವರು ತಿಳಿಸಿದರು.
ಇದನ್ನೂ ಓದಿ | CBSE Exam Date | ವಿದ್ಯಾರ್ಥಿಗಳೇ ಗಮನಿಸಿ, ಜಾಲತಾಣಗಳಲ್ಲಿರುವ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ನಕಲಿ