ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 12 ಮತ್ತು 10ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಎರಡೂ ವಿಭಾಗಗಳಲ್ಲೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಅಷ್ಟೆ ಅಲ್ಲ, ಸಿಬಿಎಸ್ಇ 10 ಮತ್ತು 12 ನೇ ತರಗತಿಗಳಲ್ಲಿ ಗರಿಷ್ಠ ಪಾಸ್ ಪರ್ಸಂಟೇಜ್ ದಾಖಲಾಗಿದ್ದು ಕೇರಳದ ತಿರುವನಂತಪುರಂನಲ್ಲಿ. ಅಂದರೆ ತಿರುವನಂಪುರಂನಲ್ಲಿಯೇ ಗರಿಷ್ಠ ಮಟ್ಟದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದು ಬಿಟ್ಟರೆ ಈ ಎರಡೂ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿ ಬೆಂಗಳೂರು ಮತ್ತು ಮೂರನೇ ಸ್ಥಾನದಲ್ಲಿ ಚೆನ್ನೈ ಇದೆ.
ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ. 87.33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಶೇ.90.68ರಷ್ಟು ಹುಡುಗಿಯರು ಮತ್ತು ಶೇ.84.67ರಷ್ಟು ಹುಡುಗರು ಪಾಸ್ ಆಗಿದ್ದಾರೆ. ಹಾಗೇ, ಸಿಬಿಎಸ್ಇ 10ನೇ ತರಗತಿಯಲ್ಲಿ ಒಟ್ಟಾರೆ ಶೇ.93.12ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹುಡುಗಿಯರು ಶೇ.94.25ರಷ್ಟು ಮತ್ತು ಶೇ.92.27ರಷ್ಟು ಹುಡುಗರು ಪಾಸ್ ಆಗಿದ್ದಾರೆ.
ಬೆಂಗಳೂರಿಗೆ ಎರಡನೇ ಸ್ಥಾನ
ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶದಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. 10ನೇ ತರಗತಿ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿ ಕೇರಳದ ತಿರುವನಂತಪುರವಿದ್ದು ಶೇ. 99.91 ಪಾಸ್ ಪರ್ಸಂಟೇಜ್ ದಾಖಲಾಗಿದೆ. ಎರಡನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಶೇ.99.18 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಮೂರನೇ ಸ್ಥಾನ ಚೆನ್ನೈ ಪಾಲಾಗಿದ್ದು ಇಲ್ಲಿ ಶೇ. 99.14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 4ನೇ ಸ್ಥಾನದಲ್ಲಿ ಅಜ್ಮೇರ್ ನಗರವಿದ್ದು, ಇಲ್ಲಿನ ಪಾಸ್ ಪರ್ಸಂಟೇಜ್ ಒಟ್ಟು ಶೇ. 97.27. ಕೊನೇ ಸ್ಥಾನದಲ್ಲಿ ಗುವಾಹಟಿ ಇದ್ದು, ಇಲ್ಲಿ ಶೇ.76.90ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಇದನ್ನೂ ಓದಿ: CBSE Class 12 Results: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ; ಯಾವ ವೆಬ್ಸೈಟ್ನಲ್ಲಿ ಸಿಗಲಿದೆ ರಿಸಲ್ಟ್?
ಸಿಬಿಎಸ್ಇ 12ನೇ ತರಗತಿ ಫಲಿತಾಂಶದಲ್ಲಿ ಕೂಡ ತಿರುವನಂತಪುರಂ, ಬೆಂಗಳೂರು ಮತ್ತು ಚೆನ್ನೈಗಳೇ ಮೊದಲ ಮೂರು ಸ್ಥಾನ ಹಂಚಿಕೊಂಡಿವೆ. ಮೊದಲ ಸ್ಥಾನದಲ್ಲಿರುವ ತಿರುವನಂತಪುರಂನಲ್ಲಿ ಶೇ. 99.91, 2ನೇ ಸ್ಥಾನದಲ್ಲಿರುವ ಬೆಂಗಳೂರಲ್ಲಿ ಶೇ.98.64 ಮತ್ತು 3ನೇ ಸ್ಥಾನದಲ್ಲಿರುವ ಚೆನ್ನೈನಲ್ಲಿ ಶೇ.97.40 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇಲ್ಲಿ ನಾಲ್ಕನೇ ಸ್ಥಾನದಲ್ಲಿ ಪೂರ್ವ ದೆಹಲಿ ಇದ್ದು, ಶೇ.93.24 ಪಾಸ್ ಪರ್ಸಂಟೇಜ್ ದಾಖಲಾಗಿದೆ. 16ನೇ ಅಂದರೆ ಕೊನೇ ಸ್ಥಾನದಲ್ಲಿ ಪ್ರಯಾಗ್ ರಾಜ್ ಇದೆ ಮತ್ತು ಇಲ್ಲಿ 78.05 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.