ನವ ದೆಹಲಿ: ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಬೆಳಗ್ಗೆ 11ಗಂಟೆಗೆ ಪ್ರಾರಂಭವಾಗಿದೆ. ಇನ್ನೂ ಫಲಿತಾಂಶ ಹೊರಬಿದ್ದಿಲ್ಲ. ಸಂಜೆ ಹೊತ್ತಿಗೆ ರಾಷ್ಟ್ರಪತಿ ಯಾರೆಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ಈ ಮಧ್ಯೆ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಹುಟ್ಟೂರಾದ ಒಡಿಶಾದ ಉಪರ್ಬೇಡ ಹಳ್ಳಿಯಲ್ಲಿ ಈಗಾಗಲೇ ಸಂಭ್ರಮಾಚರಣೆ ಪ್ರಾರಂಭವಾಗಿದೆ. ಹೇಗೆ ಲೆಕ್ಕಾಚಾರ ಹಾಕಿ ನೋಡಿದರೂ ದ್ರೌಪದಿ ಮುರ್ಮು ಗೆಲುವು ನಿಶ್ಚಿತ ಎಂಬ ವಾತಾವರಣವೇ ಇರುವುದರಿಂದ ಮುರ್ಮು ಊರಲ್ಲೀಗ ಸಿಹಿ ತಯಾರಿಕೆ ಭರ್ಜರಿಯಾಗಿಯೇ ನಡೆಯುತ್ತಿದೆ.
ಒಡಿಶಾದ ಉಪರ್ಬೇಡ ಹಳ್ಳಿ, ರಾಜ್ಯ ರಾಜಧಾನಿ ಭುವನೇಶ್ವರದಿಂದ 280ಕಿಮೀ ದೂರದಲ್ಲಿದೆ. ಬೆಳಗ್ಗೆ ಮತ ಎಣಿಕೆ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿಯೇ ಈ ಊರಲ್ಲಿ ಸಿಹಿ ತಯಾರು ಮಾಡಲು ತೊಡಗಿದ್ದಾರೆ. ʼಈ ಪುಟ್ಟ, ದುರ್ಗಮ ಹಳ್ಳಿಯಲ್ಲಿ ಹುಟ್ಟಿದ ದ್ರೌಪದಿ ಮುರ್ಮು ಇಂದು ದೇಶದ ರಾಷ್ಟ್ರಪತಿಯಾಗಲಿದ್ದಾರೆ. ಇದು ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ. ಒಡಿಶಾದ ಮಗಳು ಅವರುʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಇಡೀ ಊರಿಗೆ ಲಾಡು ಹಂಚಿ, ಸಂಭ್ರಮಾಚರಣೆ ಮಾಡಲು ಇವರೆಲ್ಲ ನಿರ್ಧರಿಸಿದ್ದಾರೆ. ಸುಮಾರು 20ಸಾವಿರ ಲಡ್ಡುಗಳನ್ನು ಈಗಾಗಲೇ ತಯಾರಿಸಿ ಇಟ್ಟಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ಹಳ್ಳಿಯ ಹಿರಿಯರನ್ನು ಮಾತನಾಡಿಸಿದಾಗ, ಅವರು ತುಂಬ ಉತ್ಸಾಹದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ʼನಾನಂತೂ ಸಿಕ್ಕಾಪಟೆ ಖುಷಿಯಾಗಿದ್ದೇನೆ ಇಂದು. ನಾವೆಲ್ಲ ಸೇರಿ ಲಡ್ಡು ತಯಾರು ಮಾಡಿಟ್ಟಿದ್ದೇವೆ. ಮುರ್ಮು ರಾಷ್ಟ್ರಪತಿ ಎಂದು ಘೋಷಣೆಯಾಗುವುದನ್ನೇ ಕಾಯುತ್ತಿದ್ದೇವೆʼ ಎಂದು ಹೇಳಿದ್ದಾರೆ.
ದ್ರೌಪದಿ ಮುರ್ಮು ಬುಡಕಟ್ಟು ಜನಾಂಗದ ಮಹಿಳೆ. ಅವರ ಪೂರ್ವಜರು ನೆಲೆಸಿದ್ದ ಉಪರ್ಬೇಡದಲ್ಲಿ ಈಗಲೂ ಇವರಿಗಾಗಿ ಒಂದು ಮನೆಯಿದೆ. ಮುರ್ಮು ತಂದೆ ಇಲ್ಲಿಯೇ ನೆಲೆಸಿದ್ದರು. ಈಗ ಅವರು ಬದುಕಿಲ್ಲದ ಕಾರಣ ಮುರ್ಮು ಸಂಬಂಧಿ ದುಲಾರಾಮ್ ತುಡು ಎಂಬುವರು ಈ ಮನೆಯಲ್ಲಿ ವಾಸವಾಗಿದ್ದಾರೆ. ಫಲಿತಾಂಶ ಬರುತ್ತಿದ್ದಂತೆ ಇಲ್ಲಿ ಬುಡಕಟ್ಟು ಸಂಪ್ರದಾಯದ ಜಾನಪದ ನೃತ್ಯ, ಹಾಡು ಪ್ರದರ್ಶನ ನಡೆಯಲಿದೆ. ರಸ್ತೆಗಳನ್ನೆಲ್ಲ ಅಲಂಕರಿಸಲಾಗಿದೆ.
ಇದನ್ನೂ ಓದಿ: ಮುರ್ಮು VS ಸಿನ್ಹಾ: ಇಂದು ಹೊರಬೀಳಲಿದೆ ರಾಷ್ಟ್ರಪತಿ ಚುನಾವಣೆ ಫಲಿತಾಂಶ