Site icon Vistara News

The Kerala Story: ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್​; 10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

Censor Board gives A certificate to The Kerala Story

#image_title

‘ದಿ ಕೇರಳ ಸ್ಟೋರಿ (The Kerala Story)’ ಎಂಬ ಹಿಂದಿ ಸಿನಿಮಾ ಸದ್ಯ ಚರ್ಚೆಯಲ್ಲಿ ಇರುವ ವಿಷಯ. ಕೇರಳದಿಂದ ಉದ್ಯೋಗ ಅರಸಿ ಹೋದ ಹುಡುಗಿಯರನ್ನು ಇಸ್ಲಾಮ್​ಗೆ ಮತಾಂತರ ಮಾಡಿ, ಅವರನ್ನು ಐಸಿಸ್​ ಭಯೋತ್ಪಾದನ ಶಿಬಿರಗಳಿಗೆ ಕಳಿಸುವ ಕತೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೇ 5ರಂದು ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ಈಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC-ಸೆನ್ಸಾರ್​ ಮಂಡಳಿ-Censor Board) ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್ (A certificate To The Kerala Story)​ ಕೊಟ್ಟಿದೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿದ್ದ 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರ ಸಂದರ್ಶನದ ದೃಶ್ಯವೂ ಸೇರಿ 10 ದೃಶ್ಯಗಳನ್ನು ತೆಗೆದುಹಾಕಲಾಗಿದೆ.

‘ಎಲ್ಲ ಹಿಂದು ದೇವತೆಗಳನ್ನು ಅನುಚಿತವಾಗಿ ಉಲ್ಲೇಖಿಸಿ ಬರೆದ ಸಂಭಾಷಣೆಗಳನ್ನೂ ಸೆನ್ಸಾರ್ ಮಂಡಳಿ ತೆಗೆದಿದೆ. ಅಷ್ಟೇ ಅಲ್ಲ, ಭಾರತದಲ್ಲಿರುವ ಎಲ್ಲ ಕಮ್ಯೂನಿಸ್ಟ್​ಗಳೂ ದೊಡ್ಡ ಕಪಟಿಗಳು ಎಂದು ಹೇಳಿರುವ ಒಂದು ಡೈಲಾಗ್​​ನಲ್ಲಿರುವ ಭಾರತೀಯರು (Indians) ಎಂಬ ಶಬ್ದವನ್ನು ಡಿಲೀಟ್ ಮಾಡಲಾಗಿದೆ. ವಿವಾದ ಸೃಷ್ಟಿಸುವ ಹಲವು ಸಂಭಾಷಣೆ ಮತ್ತು ದೃಶ್ಯಗಳು ಸಿನಿಮಾದಿಂದ ಕತ್ತರಿಸಲ್ಪಟ್ಟಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗೇ, ಸಿನಿಮಾದಲ್ಲಿ ಒಂದು ಟಿವಿ ಸಂದರ್ಶನದ ದೃಶ್ಯವಿತ್ತು. ಅದು ಮಾಧ್ಯಮವರು ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಸಂದರ್ಶಿಸುವ ಚಿತ್ರಣ. ಮಾಧ್ಯಮದವರು ಕೇಳುವ ಪ್ರಶ್ನೆಗೆ ಉತ್ತರಿಸುವ ಆ ಮಾಜಿ ಸಿಎಂ ‘ಕೇರಳದಲ್ಲಿ ಯುವಜನರನ್ನು ದೊಡ್ಡಮಟ್ಟದಲ್ಲಿ ಇಸ್ಲಾಮ್​​ಗೆ ಮತಾಂತರಗೊಳಿಸಲಾಗುತ್ತಿದೆ. ಹೀಗಾಗಿ ಈ ರಾಜ್ಯ ಇನ್ನೆರಡು ದಶಕದಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗುತ್ತದೆ’ ಎಂದು ಹೇಳುತ್ತಾರೆ. ಆದರೆ ಈ ದೃಶ್ಯವನ್ನು ಸೆನ್ಸಾರ್​ ಮಂಡಳಿ ತೆಗೆಸಿದೆ. ಸಿನಿಮಾದಲ್ಲಿ ಈ ಟಿವಿ ಸಂದರ್ಶನದ ಚಿತ್ರಣ ಪ್ರಸಾರವಾಗಲೇಬಾರದು ಎಂದು ಆದೇಶಿಸಿದೆ.

ಇದನ್ನೂ ಓದಿ: The Kerala Story Review : ಲವ್‌ ಜಿಹಾದ್‌, ಭಯೋತ್ಪಾದನೆಯ ಕ್ರೂರ ಮುಖದ ಮನಮುಟ್ಟುವ ಚಿತ್ರಣ

ಕೇರಳದ ನಾಲ್ವರು ಹಿಂದು ಯುವತಿಯರು, ಸಾಮಾನ್ಯ ಕಾಲೇಜು ವಿದ್ಯಾರ್ಥಿನಿಯಾಗಿದ್ದವರು ಬಳಿಕ ಇಸ್ಲಾಮ್​ಗೆ ಮತಾಂತರಗೊಂಡ ಬಗೆ, ಅವರು ಭಯೋತ್ಪಾದಕ ಸಂಘಟನೆಯ ಭಾಗವಾಗಿದ್ದು ಹೇಗೆ ಎಂಬಿತ್ಯಾದಿ ಕತೆಗಳನ್ನು ಸುದಿಪ್ತೋ ಸೇನ್​ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಲವ್​ ಜಿಹಾದ್​, ಮತಾಂತರಗಳು ಹೇಗೆ ನಡೆಯುತ್ತಿವೆ ಎಂಬುದನ್ನು ಸಿನಿಮಾ ಚಿತ್ರಕತೆ ಒಳಗೊಂಡಿದೆ. ಕೇರಳದ ವಾಸ್ತವ ಇದು ಎಂದು ಬಿಜೆಪಿ ರಾಜಕೀಯ ಪಕ್ಷ ಮತ್ತು ಹಲವು ಹಿಂದು ಸಂಘಟನೆಗಳು ಹೇಳುತ್ತಿವೆ. ಇನ್ನು ಈ ಸಿನಿಮಾವನ್ನು ನಿರ್ಮಿಸುವುದಕ್ಕೂ ಮೊದಲು ಹಲವು ಆಯಾಮದಲ್ಲಿ ನಾವು ಅಧ್ಯಯನ ಮಾಡಿಕೊಂಡಿದ್ದೇವೆ ಎಂದು ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ತಿಳಿಸಿದ್ದಾರೆ.

ದಿ ಕೇರಳ ಸ್ಟೋರಿ ನೈಜ ಘಟನೆ ಆಧಾರಿತ ಎಂದು ಚಿತ್ರ ತಂಡ ಘೋಷಿಸಿದ ನಂತರ ದೊಡ್ಡ ವಿವಾದ ಆಗಿದೆ. ದಿ ಕೇರಳ ಸ್ಟೋರಿಯಲ್ಲಿ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಹೀಗಾಗಿ ಅದರ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಆಗ್ರಹಿಸುತ್ತಿವೆ. ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಕೆಲವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮುರ್ತಿಗಳಾದ ಕೆ.ಎಂ.ಜೋಸೆಫ್​ ಮತ್ತು ಬಿ.ವಿ.ನಾಗರತ್ನಾ ಅವರ ಪೀಠ, ‘ಸಿನಿಮಾ ಬಿಡುಗಡೆಗೆ ನಾವು ತಡೆ ನೀಡಲು ಸಾಧ್ಯವೇ ಇಲ್ಲ. ಅರ್ಜಿದಾರರು ಮನವಿ ಸಲ್ಲಿಸಬೇಕಾದ ಜಾಗ ಸುಪ್ರೀಂಕೋರ್ಟ್ ಅಲ್ಲ. ಮೊದಲು ಸಂಬಂಧಿತ ಹೈಕೋರ್ಟ್​ಗೆ ಹೋಗಿ ಅಥವಾ ಅದಕ್ಕೆಂದೇ ಬೇರೆ ವೇದಿಕೆಗಳು ಇರುತ್ತವೆ, ಅಲ್ಲಿಗೆ ಹೋಗಿ ಎಂದು ಹೇಳಿದೆ.

Exit mobile version