ಪಶ್ಚಿಮ ಬಂಗಾಳದಲ್ಲಿ (West Bengal) ಜು.8ರಂದು ನಡೆಯಲಿರುವ ಪಂಚಾಯಿತಿ ಚುನಾವಣೆ ಮತದಾನ/ಮತ ಎಣಿಕೆ (West Bengal Panchayat Polls) ಸಂದರ್ಭಗಳಲ್ಲಿ ರಾಜ್ಯಾದ್ಯಾಂತ ಕಾವಲಿಗೆ ಕೇಂದ್ರ ಸಶಸ್ತ್ರ ಪಡೆಗಳ ಯೋಜನೆಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ಭದ್ರತೆ ಕಲ್ಪಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ಬಿಡಬೇಕು ಎಂದು ಮನವಿ ಮಾಡಿ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಪಶ್ಚಿಮ ಬಂಗಾಳದಲ್ಲಿ ಬಹುತೇಕ ಎಲ್ಲ ಚುನಾವಣೆಗಳ ಸಂದರ್ಭದಲ್ಲೂ ಹಿಂಸಾಚಾರ ನಡೆಯುತ್ತದೆ. ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾದ ಮೇಲೆ ನಾಲ್ವರು ಹತ್ಯೆಗೀಡಾಗಿದ್ದಾರೆ. ಅದರಲ್ಲಿ ಒಬ್ಬರಂತೂ ತೃಣಮೂಲ ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದವರು. ಹೀಗಾಗಿ ಮುಂಬರುವ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸಶಸ್ತ್ರ ಪಡೆಯನ್ನು ನಿಯೋಜಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸುವೇಂದು ಅಧಿಕಾರಿ ಅವರು ಕೋಲ್ಕತ್ತ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋಲ್ಕತ್ತ ಹೈಕೋರ್ಟ್ ಪಂಚಾಯಿತಿ ಚುನಾವಣೆ ವೇಳೆ ಕೇಂದ್ರ ಸಶಸ್ತ್ರ ಪಡೆಗಳ ನಿಯೋಜನೆಗೆ ಆದೇಶ ನೀಡಿತ್ತು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಹರಿದ ರಕ್ತ; ಪಂಚಾಯಿತಿ ಚುನಾವಣೆಯ ಟಿಎಂಸಿ ಅಭ್ಯರ್ಥಿಯ ಹತ್ಯೆ
ಆದರೆ ಕೋಲ್ಕತ್ತ ಹೈಕೋರ್ಟ್ ನಿರ್ದೇಶನದ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಸುವೇಂದು ಅಧಿಕಾರಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ‘ಸೂಕ್ಷ್ಮ ಪ್ರದೇಶಗಳ ಪಟ್ಟಿ ಮಾಡಿ, ಅಲ್ಲಿ ಮಾತ್ರ ಕೇಂದ್ರ ಸಶಸ್ತ್ರ ಪಡೆಗಳ ನಿಯೋಜನೆಗೆ ನಿರ್ದೇಶನ ಮಾಡುವಂತೆ ಹೇಳಿದ್ದರು. ಈಗಾಗಲೇ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆ ಕಾರ್ಯ ಪ್ರಾರಂಭವಾಗಿದೆ. ಆದರೆ ವರದಿ ಕೊಡುವ ಮೊದಲೇ ಹೈಕೋರ್ಟ್ ತೀರ್ಪು ನೀಡಿದೆ. ಕೇಂದ್ರ ಸಶಸ್ತ್ರ ಪಡೆಗಳ ಬದಲಾಗಿ, ನೆರೆರಾಜ್ಯಗಳ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಬಿಡಬೇಕು ’ ಎಂದು ರಾಜ್ಯ ಸರ್ಕಾರ/ಚುನಾವಣಾ ಆಯೋಗಗಳು ಹೇಳಿದ್ದವು. ಆದರೆ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ನ ತೀರ್ಪನ್ನೇ ಎತ್ತಿ ಹಿಡಿದಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ‘ಚುನಾವಣೆ ನಡೆಸುವುದು ಎಂದರೆ ಹಿಂಸಾಚಾರ ನಡೆಸಲು ಪರವಾನಗಿ ಕೊಡುವುದು ಎಂದರ್ಥವಲ್ಲ. ಚುನಾವಣೆ ವೇಳೆ ಹಿಂಸಾಚಾರ ನಡೆಯಲೇಬಾರದು’ ಎಂದು ಹೇಳಿದೆ.