ನವ ದೆಹಲಿ: ಉಪರಾಷ್ಟ್ರಪತಿ ಚುನಾವಣೆಯ ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೆಟ್ ಆಳ್ವಾ(Margaret Alva) ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರವನ್ನು ದೊಡ್ಡಣ್ಣ ಎಂದು ಉಲ್ಲೇಖಿಸಿರುವ ಅವರು, ʼದೊಡ್ಡಣ್ಣ (Big Brother)ನಿಗೆ ಭಯ. ಹೀಗಾಗಿ ರಾಜಕಾರಣಿಗಳ ಫೋನ್ ಟ್ಯಾಪ್ ಮಾಡುತ್ತಿದ್ದಾನೆ. ಆದರೆ ದೊಡ್ಡಣ್ಣನ ಈ ಭಯ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆʼ ಎಂದು ಹೇಳಿದ್ದಾರೆ. ʼನಾನು ಬಿಜೆಪಿಯಲ್ಲಿರುವ ನನ್ನ ಕೆಲವು ಸ್ನೇಹಿತರು, ಆಪ್ತರ ಬಳಿ ಫೋನ್‌ನಲ್ಲಿ ಮಾತನಾಡಿದೆ. ಅದಾದ ಬಳಿಕ ನನ್ನ ಫೋನ್ ಕರೆಗಳೆಲ್ಲ ಡೈವರ್ಟ್ ಆಗುತ್ತಿವೆ. ಯಾವುದೇ ಕರೆ ಮಾಡಲಾಗಲೀ, ಸ್ವೀಕರಿಸಲಾಗಲಿ ಸಾಧ್ಯವಾಗುತ್ತಿಲ್ಲʼ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ʼನನ್ನ ಫೋನ್ ರಿಸ್ಟೋರ್ (ಮರುಸ್ಥಾಪಿಸಿ) ಮಾಡಿಕೊಡಿ. ಖಂಡಿತವಾಗಿಯೂ ಬಿಜೆಪಿ, ಟಿಎಂಸಿ, ಮತ್ತು ಬಿಜೆಡಿಯ ಯಾವುದೇ ಸಂಸದರು/ಶಾಸಕರಿಗೆ ಕರೆ ಮಾಡುವುದಿಲ್ಲ ಎಂಬ ಭರವಸೆ ಕೊಡುತ್ತೇನೆʼ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.. ಅದರೊಂದಿಗೆ ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL) ಮತ್ತು ದೆಹಲಿ ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್ (MTNL)ಗಳನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿ ಇದೇ ವಿಚಾರಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
ಕೇಂದ್ರ ಸಚಿವರಿಂದ ತಿರುಗೇಟು
ಮಾರ್ಗರೆಟ್ ಆಳ್ವಾ ಈ ಆರೋಪಕ್ಕೆ ಬಿಜೆಪಿಯ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿ, ʼಮಾರ್ಗರೆಟ್ ಆಳ್ವಾ ಫೋನ್‌ನ್ನು ಯಾಕೆ ಟ್ಯಾಪ್ ಮಾಡಬೇಕು? ಅವರು ಯಾರಿಗಾದರೂ ಕರೆ ಮಾಡಿದರೂ ನಮಗೇನೂ ಸಮಸ್ಯೆಯಿಲ್ಲ. ಉಪರಾಷ್ಟ್ರಪತಿ ಚುನಾವಣೆಯಲ್ಲೂ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯ ಗೆಲುವೇ ನಿಚ್ಛಳವಾಗಿರುವಾಗ ಫೋನ್ ಟ್ಯಾಪ್ ಮಾಡಿಕೊಂಡು ನಾವೇನು ಮಾಡೋಣ? ಇಂಥ ಸಿಲ್ಲಿಸಿಲ್ಲಿ, ಬಾಲಿಶ ಆರೋಪಗಳನ್ನು ಮಾಡುವುದು ಸರಿಯಲ್ಲ. ಅದರಲ್ಲೂ ಮಾರ್ಗರೆಟ್ ಆಳ್ವಾರಂಥ ಹಿರಿಯ ವ್ಯಕ್ತಿಗೆ ಇದೆಲ್ಲ ಶೋಭೆಯಲ್ಲʼ ಎಂದು ಹೇಳಿದ್ದಾರೆ. ಹಾಗೇ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಮಾತನಾಡಿ, “ಹತಾಶೆಗೆ ಒಳಗಾದ ನಿರುತ್ಸಾಹಿಗಳು ಇಂಥ ಮಾತುಗಳನ್ನಾಡುತ್ತ ಕಾಲ ಕಳೆಯುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ; ರಾಹುಲ್, ಪವಾರ್ ಜತೆ ತೆರಳಿ ನಾಮಪತ್ರ ಸಲ್ಲಿಸಿದ ಮಾರ್ಗರೆಟ್ ಆಳ್ವಾ