ನವ ದೆಹಲಿ: ಮುದ್ರಣ ಮಾಧ್ಯಮಗಳಿಗೆ ಇರುವಂತೆ ಡಿಜಿಟಲ್ ಮಾಧ್ಯಮಗಳಿಗೂ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿದೆ ಮತ್ತು ಜುಲೈ 18ರಿಂದ ಪ್ರಾರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ನಿರ್ಧಾರ ಮಾಡಿದೆ ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ. ಇವತ್ತಿನವರೆಗೆ ಡಿಜಿಟಲ್ ಮಾಧ್ಯಮಗಳು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಯಂತ್ರಣಕ್ಕೆ ಒಳಪಟ್ಟಿರಲಿಲ್ಲ. ಆದರೆ ಯಾರಾದರೂ ಡಿಜಿಟಲ್ ಮಾಧ್ಯಮ ಪ್ರಾರಂಭ ಮಾಡುವವರು ಸ್ವಯಂಪ್ರೇರಿತವಾಗಿ ಪ್ರೆಸ್ ರಿಜಿಸ್ಟ್ರಾರ್ ಜನರಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದಿತ್ತು. ಈ ನಿಯಮ 2021ರಿಂದ ಜಾರಿಯಾಗಿತ್ತು. ಆದರೆ ಈಗ ಕಾಯಿದೆ ತಿದ್ದುಪಡಿ ಮೂಲಕ, ಡಿಜಿಟಲ್ ಮೀಡಿಯಾಗಳ ನೋಂದಣಿಯನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಒಟ್ಟು 24 ಮಸೂದೆಗಳನ್ನು ಪರಿಚಯಿಸಲಿದ್ದು, ಅದರಲ್ಲಿ ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣ ಹೇರುವ ಮಸೂದೆಯೂ ಸೇರಿದೆ. ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ (PRB) ಕಾಯಿದೆ 1867ರ ಬದಲಿಗೆ ಪತ್ರಿಕೆ ಮತ್ತು ನಿಯತಕಾಲಿಕ ಮಸೂದೆ 2022ನ್ನು ಅಸ್ತಿತ್ವಕ್ಕೆ ತರಲಾಗುವುದು. ಹಾಗಂತ ಪಿಆರ್‌ಬಿ ಕಾಯಿದೆಯಲ್ಲಿರುವ ಅಂಶಗಳನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಪತ್ರಿಕಾ ಸ್ವಾತಂತ್ರ್ಯಕ್ಕೂ ಧಕ್ಕೆಯಾಗದ, ಮಧ್ಯಮ ಮತ್ತು ಸಣ್ಣ ಪ್ರಕಾಶಕರಿಗೂ ತೊಂದರೆಯಾಗದಂತೆ ನೋಂದಣಿ ನಿಯಮಗಳನ್ನು ಸರಳೀಕರಿಸಲಾಗುವುದು ಎಂದು ಲೋಕಸಭಾ ಕಾರ್ಯಾಲಯದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ವಿರೋಧದ ನಡುವೆಯೇ ಲೋಕಸಭೆ ಒಪ್ಪಿಗೆ ಪಡೆದ ಅಪರಾಧ ದತ್ತಾಂಶ ಮಸೂದೆ
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಗಾಗಲೇ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಗೆ ತಿದ್ದುಪಡಿ ತಂದಿದೆ. ಹಾಗೇ, ಕೇಬಲ್ ನೆಟ್ವರ್ಕ್‌ಗಳು ಸಾಮಾಜಿಕ ಮಾಧ್ಯಮಗಳು, ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆಯನ್ನು ಪಾಲನೆ ಮಾಡುತ್ತಿವೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಸಿನೆಮಾಟೋಗ್ರಾಫ್ ಕಾಯಿದೆಗೆ ಕರಡು ತಿದ್ದಪಡಿಯ ಪ್ರಸ್ತಾವನೆಯನ್ನೂ ಇಟ್ಟಿದೆ.
ಇಷ್ಟು ದಿನ ಪತ್ರಿಕೆ -ನಿಯತಕಾಲಿಕಗಳು, ದೃಶ್ಯ ಮಾಧ್ಯಮಗಳೆಲ್ಲ ನೋಂದಣಿಗಾಗಿ ವಿವಿಧ ಹಂತದಲ್ಲಿ ಪ್ರಕ್ರಿಯೆಗಳನ್ನು ನಡೆಸಬೇಕಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಅಫಿಡಿವಿಟ್ ಕೊಟ್ಟು, ಬಳಿಕ ದೃಢೀಕರಣಕ್ಕಾಗಿ ಕಾಯಬೇಕಿತ್ತು. ಆದರೆ ಈಗ ಕೇಂದ್ರ ಮಂಡಿಸಲು ಮುಂದಾಗಿರುವ ಮಸೂದೆಯಲ್ಲಿ ಇದನ್ನು ಸರಳೀಕರಿಸಲಾಗಿದೆ. ದಿನಪತ್ರಿಕೆಗಳು, ನಿಯತಕಾಲಿಕಗಳ ಶೀರ್ಷಿಕೆ ಮತ್ತು ನೋಂದಣಿ ಕ್ರಿಯೆಗಳು ಪ್ರೆಸ್ ರಿಜಿಸ್ಟ್ರಾರ್ ಜನರಲ್‌ನಲ್ಲಿ ಏಕಕಾಲದಲ್ಲಿ ನಡೆಯುವಂತೆ ರೂಪಿಸಲಾಗಿದೆ ಎಂದು ಐ &ಬಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇವಿಷ್ಟೇ ಅಲ್ಲ, ಯಾವುದೇ ಸುದ್ದಿ ಪತ್ರಿಕೆಗಳಿಗೆ ಮಾನ್ಯತೆ ನೀಡಲು, ಸೌಲಭ್ಯ ಕೊಡಲು ಮತ್ತು ಸರ್ಕಾರಿ ಜಾಹೀರಾತುಗಳನ್ನು ನೀಡುವ ಮಾನದಂಡ/ಷರತ್ತುಗಳು/ನಿಬಂಧನೆಗಳನ್ನು ವಿಧಿಸುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇನ್ನಷ್ಟು ಸ್ಪಷ್ಟ ನಿಲುವನ್ನು, ಅಧಿಕಾರವನ್ನು ಈ ಮಸೂದೆ ಒದಗಿಸಲಿದೆ ಎಂದೂ ಹೇಳಲಾಗಿದೆ. ಇ-ಪೇಪರ್‌ಗಳ ನೋಂದಣಿಯನ್ನೂ ಮತ್ತಷ್ಟು ಸರಳೀಕೃತಗೊಳಿಸುವ ವಿಚಾರಗಳನ್ನೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಡಿಜಿಟಲ್ ಮಾಧ್ಯಮಗಳಿಗೆ ಕಡಿವಾಣ ಹಾಕಲಿದೆಯಾ ಕೇಂದ್ರ ಸರ್ಕಾರ?; ಕಾಯ್ದೆ ತಿದ್ದುಪಡಿಗೆ ಸಿದ್ಧತೆ !