Site icon Vistara News

ಡಿಜಿಟಲ್‌ ಮಾಧ್ಯಮಗಳಿಗೆ ಕಡಿವಾಣ ಹಾಕಲಿದೆಯಾ ಕೇಂದ್ರ ಸರ್ಕಾರ?; ಕಾಯ್ದೆ ತಿದ್ದುಪಡಿಗೆ ಸಿದ್ಧತೆ !

Digital Media

ನವ ದೆಹಲಿ: ಡಿಜಿಟಲ್‌ ಮಾಧ್ಯಮ (Digital Media) ಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜುಲೈ 18ರಿಂದ ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದ್ದು, ಅದರಲ್ಲಿ ಕೇಂದ್ರ ಸರ್ಕಾರ ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಕಾನೂನಿನಲ್ಲಿ ತಿದ್ದುಪಡಿ ಮಾಡಲಿದೆ. ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿ, ಕಾಯಿದೆಗಾಗಿ ಮಾರ್ಪಡಿಸುವ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಂದರೆ, ಪತ್ರಿಕಾ ಮತ್ತು ನಿಯತಕಾಲಿಕಗಳಿಗೆ ನೋಂದಣಿ ಕಡ್ಡಾಯ ಇರುವಂತೆ ಡಿಜಿಟಲ್‌ ಮಾಧ್ಯಮಗಳಿಗೆ ಇರಲಿಲ್ಲ. ಈ ಮಾಧ್ಯಮಗಳು ಯಾವುದೇ ಕಾನೂನು-ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ತಿದ್ದುಪಡಿ ತಂದರೆ, ಡಿಜಿಟಲ್‌ ಮಾಧ್ಯಮಗಳಿಗೆ ನೋಂದಣಿ ಕಡ್ಡಾಯವಾಗಲಿದೆ. ಹಾಗೇ, ಇದೇ ಮೊದಲ ಬಾರಿಗೆ ಡಿಜಿಟಲ್‌ ಮೀಡಿಯಾಗಳೂ ಕಾನೂನು ನಿಯಂತ್ರಣಕ್ಕೆ ಒಳಪಟ್ಟಂತಾಗುತ್ತದೆ.

ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಕಾಯ್ದೆ (Press and Periodicals Bill) 1867ರ ತಿದ್ದುಪಡಿಗಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕ್ರಿಯೆಗಳನ್ನು ನಡೆಸುತ್ತಿದೆ. ಯಾವುದೇ ವಿದ್ಯುನ್ಮಾನ ಸಾಧನಗಳ (ಕಂಪ್ಯೂಟರ್‌, ಮೊಬೈಲ್‌ ಅಥವಾ ಇನ್ಯಾವುದೇ ಇರಲಿ) ಮುಖಾಂತರ ಡಿಜಿಟಲ್‌ ಸ್ವರೂಪದಲ್ಲಿ ಸುದ್ದಿಗಳನ್ನು ಕೊಡುವವರು ಪ್ರೆಸ್‌ ರಿಜಿಸ್ಟ್ರಾರ್‌ ಜನರಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೊಸದಾಗಿ ಡಿಜಿಟಲ್‌ ಮಾಧ್ಯಮ ಪ್ರಾರಂಭ ಮಾಡುವವರು ಅದಕ್ಕೂ ಮೊದಲು ನೋಂದಣಿ ಮಾಡಿಸಿಕೊಳ್ಳಬೇಕು. ಹಾಗೇ, ಈಗಾಗಲೇ ಇರುವ ಡಿಜಿಟಲ್‌ ಸುದ್ದಿ ಪ್ರಕಾಶಕರು ಕಾನೂನು ಜಾರಿಗೆ ಬಂದ 90ದಿನಗಳಲ್ಲಿ ನೋಂದಣಿಗೆ ಅಪ್ಲೈ ಮಾಡಬೇಕು ಎನ್ನಲಾಗಿದೆ.

ಇನ್ನು ಡಿಜಿಟಲ್‌ ಸುದ್ದಿಗಳ ಪ್ರಕಾಶಕರಿಗೆ ನೋಂದಣಿ ವೇಳೆ ನಿರ್ದಿಷ್ಟ ನಿಯಮಗಳನ್ನು ಹೇಳಲಾಗುತ್ತದೆ. ಅದನ್ನು ಅವರು ಪಾಲಿಸಲೇಬೇಕಾಗುತ್ತದೆ. ಒಂದೊಮ್ಮೆ ನೋಂದಣಿ ಬಳಿಕ ಸುದ್ದಿ ಪ್ರಕಾಶಕರು ನಿಯಮಗಳ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿರುತ್ತದೆ. ಅವರ ನೋಂದಣಿಯನ್ನು ಅಮಾನತು, ರದ್ದುಗೊಳಿಸುವ, ದಂಡ ಹೇರುವ ಶಿಕ್ಷೆಗಳನ್ನೂ ವಿಧಿಸಬಹುದಾಗಿದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಸೋಷಿಯಲ್‌ ಮೀಡಿಯಾಗಳಿಗೆ ಕಠಿಣ ನಿಯಂತ್ರಣ ಹೇರಬೇಕು ಎಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ

Exit mobile version